ಬೆಳಗಾವಿ, ಜ. 18 (DaijiworldNews/MB) : ''ಈ ಹಿಂದೆಯೇ ನರೇಂದ್ರ ಮೋದಿ-ಅಮಿತ್ ಶಾ ಜೋಡಿ ಇದ್ದಿದ್ದರೆ ಪಾಕಿಸ್ತಾನ ಬೇಕು ಎನ್ನುವವರ ಮೇಲೆ ಇವರು ಸರ್ಜಿಕಲ್ ಸ್ಟ್ರೈಕ್ ಮಾಡುತ್ತಿದ್ದರು. ಪಾಕಿಸ್ತಾನ ಬೇಕು ಎನ್ನುವವರು ತುಂಡಾಗುತ್ತಿದ್ದರು'' ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು.
ಬಿಜೆಪಿ ವತಿಯಿಂದ ಭಾನುವಾರ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಜನಸೇವಕ ಸಮಾವೇಶ ಸಮಾರೋಪದಲ್ಲಿ ಮಾತನಾಡಿದ ಅವರು, ''ಪ್ರಧಾನಿ ಮೋದಿ ಪ್ರಧಾನ ಸೇವಕರಾದರೆ ನಾವು ಜನಸೇವಕರು. ಗ್ರಾಮ ಪಂಚಾಯತಿಯ ನಮ್ಮ ಸದಸ್ಯರು ಸರ್ಕಾರದ ಸೌಲಭ್ಯಗಳನ್ನು ಜನರಿಗೆ ತಲುಪಿಸುವ ಕಾರ್ಯ ಮಾಡಬೇಕು. ಹಾಗೆಯೇ ಅನ್ಯಾಯ, ಅಸ್ಪೃಶ್ಯತೆ ಹಾಗೂ ಜಾತಿ ದೌರ್ಜನ್ಯದ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ಮಾಡಬೇಕು'' ಎಂದು ಹೇಳಿದರು.
''ಕಾಂಗ್ರೆಸ್ ದಲ್ಲಾಳಿಗಳ ಪರ ಕೆಲಸ ಮಾಡಿದೆ'' ಎಂದು ದೂರಿದ ಅವರು, ''ರೈತರ ಆದಾಯ ದ್ವಿಗುಣ ಮಾಡಲು ಕೈಗೊಳ್ಳಬೇಕಾದ ಕ್ರಮವನ್ನು ನಮ್ಮ ಸರ್ಕಾರ ತೆಗೆದುಕೊಂಡಿದೆ. ಕನಿಷ್ಠ ಬೆಂಬಲ ಬೆಲೆ ಮುಂದುವರಿಯುತ್ತದೆ. ನಾವು ರೈತರಿಗೆ ಸ್ವಾತಂತ್ರ್ಯ ನೀಡುತ್ತಿದ್ದೇವೆ. ಹೀಗಿರುವಾಗ ನಾವು ರೈತ ವಿರೋಧಿಯೇ'' ಎಂದು ಪ್ರಶ್ನಿಸಿದರು.
''ಕಾಂಗ್ರೆಸ್ ಸರ್ಕಾರ ಅಥವಾ ಎಚ್.ಡಿ. ದೇವೇಗೌಡರು ಇದ್ದಾಗ ಕಿಸಾನ್ ಸಮ್ಮಾನ್ ಯೋಜನೆ ಇತ್ತಾ? ರೈತ ಪರ ಯೋಜನೆಗಳನ್ನು ಜಾರಿಗೊಳಿಸಿದ ಪ್ರಧಾನಿ ನರೇಂದ್ರ ಮೋದಿ ರೈತ ವಿರೋಧಿ ಆಗುತ್ತಾರಾ?'' ಎಂದು ಕೂಡಾ ಪ್ರಶ್ನಿಸಿದರು.