ದಾವಣಗೆರೆ, ಜ.17 (DaijiworldNews/PY): "ನನಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ರಾಜಕೀಯ ಪಾಠ ಹೇಳಿಕೊಟ್ಟವರು. ಅವರ ವಿರುದ್ದ ದೆಹಲಿಯಲ್ಲಿ ದೂರು ನೀಡಿಲ್ಲ. ಸಿಎಂ ಬಿಎಸ್ವೈ ಅವರ ಬಗ್ಗೆ ಮಾತನಾಡಿದರೆ ಹುಳ ಬೀಳುತ್ತದೆ" ಎಂದು ಶಾಸಕ ರೇಣುಕಾಚಾರ್ಯ ಹೇಳಿದರು.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನಾನು ದೆಹಲಿಯಲ್ಲಿ ಬಿಎಸ್ವೈ ಅವರ ವಿರುದ್ದ ದೂರು ನೀಡಿಲ್ಲ. ನಾನು ಎಂದಿಗೂ ಕೂಡಾ ಅವರ ವಿರುದ್ದವಾಗಿ ನಡೆದುಕೊಂಡಿಲ್ಲ. ಯಡಿಯೂರಪ್ಪ ಅವರು ಯಾವಾಗಲೂ ನಮ್ಮ ರಾಜಕೀಯ ನಾಯಕರು" ಎಂದರು.
"ನಾನು ಪಕ್ಷದ ಶಿಸ್ತಿನ ಸಿಪಾಯಿಯೇ ಹೊರತು ಬಂಡಾಯ ಅಲ್ಲ. ಯಡಿಯೂರಪ್ಪ ಅವರು ನನ್ನ ತಂದೆಯ ಸಮಾನ. ಎಲ್ಲಾ ಶಾಸಕರು ಸೇರಿ ಸಭೆ ನಡೆಸುತ್ತೇವೆ. ಆದರೆ, ಇದು ಯಡಿಯೂರಪ್ಪ ಅವರ ವಿರುದ್ದ ನಡೆಯುವ ಸಭೆಯಲ್ಲ. ಬದಲಾಗಿ ಲೋಪಗಳನ್ನು ಸರಿಪಡಿಸಲು ಮಾಡುತ್ತಿರುವ ಸಭೆ" ಎಂದು ಹೇಳಿದರು.
ರಮೇಶ್ ಜಾರಕಿಹೊಳಿ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಸರ್ಕಾರ ಅಧಿಕಾರಕ್ಕೆ ಬರಲು ನಯಾಪೈಸೆಯೂ ವ್ಯಯ ಮಾಡಿಲ್ಲ. ಯಾವ ಆಧಾರದ ಮೇಲೆ ರಮೇಶ್ ಜಾರಕಿಹೊಳಿ ಅವರು ಯೋಗೇಶ್ವರ್ ಅವರ ಪರವಾಗಿ ಮಾತನಾಡುತ್ತಿದ್ದಾರೋ ತಿಳಿಯುತ್ತಿಲ್ಲ. ರಾಮನಗರ ಉಪಚುನಾವಣೆಯಲ್ಲಿ ಸಚಿವ ಯೋಗೇಶ್ವರ್ ಅವರು ಅನಿತಾ ಕುಮಾರಸ್ವಾಮಿ ಅವರೊಂದಿಗೆ ಒಳಒಪ್ಪಂದ ಮಾಡಿಕೊಂಡವರು. ಇದೀಗ ಪಕ್ಷ ನನ್ನಿಂದಲೇ ಬಂದಿದೆ ಎಂದು ಬೀಗುತ್ತಿದ್ದಾರೆ" ಎಂದು ಕೆಂಡಕಾರಿದರು.