ತುಮಕೂರು, ಜ.17 (DaijiworldNews/PY): "ಪ್ರಾದೇಶಿಕ ಸಂಸ್ಕೃತಿ ಹಾಗೂ ಭಾಷೆಗಳ ಮೇಲೆ ಕೇಂದ್ರ ಸರ್ಕಾರಕ್ಕೆ ಗೌರವವಿಲ್ಲ" ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಭಾನುವಾರ ನಗರದ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ಸಂದರ್ಭ ಸುದ್ದಿಗಾರರೊಂದಿಗೆ ಮತನಾಡಿದ ಅವರು, "ಪ್ರಾದೇಶಿಕ ಸಂಸ್ಕೃತಿ ಹಾಗೂ ಭಾಷೆಗಳ ಮೇಲೆ ಕೇಂದ್ರ ಸರ್ಕಾರಕ್ಕೆ ಗೌರವವಿಲ್ಲ. ಅಧಿಕಾರಕ್ಕಾಗಿ ನಮ್ಮ ಸಂಸದರೂ ಕೂಡಾ ಬಾಯಿ ಮುಚ್ಚಿಕುಳಿತುಕೊಂಡಿದ್ದಾರೆ" ಎಂದರು.
"ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಸಾರ್ವಜನಿಕರ ಅಭಿಪ್ರಾಯದಂತೆ ನಡೆಯುತ್ತಿಲ್ಲ. ಬದಲಾಗಿ ವೈಯುಕ್ತಿಕವಾದ ಅಜೆಂಡಾದ ಮೇಲೆ ನಡೆಯುತ್ತಿವೆ" ಎಂದು ತಿಳಿಸಿದರು.
"ಕಾಂಗ್ರೆಸ್ ಪಕ್ಷವು ಜ.20ರಂದು ದೆಹಲಿಯ ರೈತ ಹೋರಾಟವನ್ನು ಬೆಂಬಲಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ನಿಂದ ರಾಜಭವನ ಚಲೋ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳು ರೈತರ ಪಾಲಿಗೆ ಮರಣ ಶಾಸನವಾಗಿದೆ" ಎಂದರು.
ಬೆಲೆ ಏರಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಅಗತ್ಯ ವಸ್ತುಗಳು ಸೇರಿದಂತೆ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಗಣನೀಯವಾಗಿ ಏರುತ್ತಿದೆ. ಜನತೆಯ ಬಗ್ಗೆ ಸರ್ಕಾರಕ್ಕೆ ಆಸಕ್ತಿ ಹೊರಟುಹೋಗಿದೆ. ಅಲ್ಲದೇ, ಯಾವುದೇ ರೀತಿಯಾದ ಅಭಿವೃದ್ದಿ ಕಾರ್ಯಗಳು ಕೂಡಾ ನಡೆಯುತ್ತಿಲ್ಲ. ಈ ಎಲ್ಲಾ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಹಾಗೂ ದೇಶದ ಜನತೆಯ ಗಮನವನ್ನು ಸೆಳೆಯುವ ಕಾರ್ಯವನ್ನು ಮಾಡಬೇಕಿದೆ" ಎಂದು ಹೇಳಿದರು.
"ಯಾರಿಗೂ ಕೂಡಾ ಕಾಂಗ್ರೆಸ್ ಪಕ್ಷವನ್ನು ಏನೂ ಮಾಡಲಾಗುವುದಿಲ್ಲ. ರಾಜ್ಯದಲ್ಲಿ 2023ರ ವೇಳೆಗೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ" ಎಂದರು.