ಬೆಂಗಳೂರು, ಜ. 17 (DaijiworldNews/MB) : ಹೇಮಾವತಿ ನೀರು ಹರಿಸುವಂತೆ ಕೋರಿದ ಗ್ರಾಮಸ್ಥರನ್ನು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಅವಾಚ್ಯವಾಗಿ ನಿಂದಿಸಿ ರೈತರ ವಿರುದ್ದ ವಾಗ್ದಾಳಿ ನಡೆಸಿದ ವಿಡಿಯೋ ವೈರಲ್ ಆಗುತ್ತಿದ್ದಂತೆ ಮಾಧುಸ್ವಾಮಿ ವಿರುದ್ದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
"ನೀರಿನ ಸಮಸ್ಯೆ ಇದೆ ಎಂದು ಯಾರಾದರೂ ನನ್ನ ಬಳಿ ಬಂದು ಒಂದು ಮಾತು ಹೇಳಿದ್ದೀರಾ?. ನನ್ನ ಬಳಿ ಒಬ್ಬನೇ ಒಬ್ಬ ಬಂದಿಲ್ಲ. ಯಾವ ನನ್ಮಗನಾದ್ರು ನನ್ನ ಬಳಿ ಬಂದು ನೀರಿನ ಸಮಸ್ಯೆ ಇದೆ ಬಗೆಹರಿಸಿ ಎಂದು ಕೇಳಿದ್ದೀರಾ?" ಎಂದು ಮಾಧುಸ್ವಾಮಿ ಪ್ರಶ್ನಿಸಿದ್ದರು.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, ''ಧರ್ಮ, ಸಂಸ್ಕೃತಿ, ಶಿಸ್ತು ಈ ಪದಗಳು ಬಿಜೆಪಿಗರ ಬಾಯಲ್ಲಿ ಬಂದರೆ ಭೂತದ ಬಾಯಲ್ಲಿ ಭಗವದ್ಗೀತೆ ಬಂದಂತೆ. ಮಹಿಳೆಯರಿಗೆ, ರೈತರಿಗೆ, ಅಧಿಕಾರಿಗಳಿಗೆ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಅವಮಾನಿಸುವುದೇ ಬಿಜೆಪಿ ಪಕ್ಷದ ಅಸಲಿ ಸಂಸ್ಕೃತಿ'' ಎಂದು ಟೀಕಿಸಿದ್ದು, ''ಅಮಿತ್ ಶಾ ಅವರೇ ನೀವು ನಡೆಸುತ್ತಿರುವುದು ಜನಸೇವಕ ಸಮಾವೇಶವಲ್ಲ, ಬಿಜೆಪಿ "ಜನಪೀಡಕರ" ಸಮಾವೇಶ'' ಎಂದು ವ್ಯಂಗ್ಯವಾಡಿದೆ.