ತುಮಕೂರು, ಜ.17 (DaijiworldNews/PY): "ನೀರಿನ ಸಮಸ್ಯೆ ಇದೆ ಎಂದು ಯಾರಾದರೂ ನನ್ನ ಬಳಿ ಬಂದು ಒಂದು ಮಾತು ಹೇಳಿದ್ದೀರಾ?. ನನ್ನ ಬಳಿ ಒಬ್ಬನೇ ಒಬ್ಬ ಬಂದಿಲ್ಲ" ಎಂದು ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಮಸ್ಥರು ಹೇಮಾವತಿ ನೀರು ಹರಿಸುವಂತೆ ಕೋರಿದ ಸಂದರ್ಭ ಸಚಿವ ಮಾಧುಸ್ವಾಮಿ ಅವರು ಗ್ರಾಮಸ್ಥರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಶಿರಾ ತಾಲ್ಲೂಕು ಬುಕ್ಕಾಪಟ್ಟಣ ಹೋಬಳಿಯ ಗೋಪಾಲದೇವರಹಳ್ಳಿ ಗ್ರಾಮಸ್ಥರು ನೀರು ಪೂರೈಕೆ ವಿಚಾರಕ್ಕೆ ಸಂಬಂಧಪಟ್ಟಂತೆ ಆಗ್ರಹಿಸಿ ಇತ್ತೀಚೆಗೆ ನಡೆದ ಗ್ರಾ.ಪಂ ಚುನಾವಣೆಯನ್ನು ಬಹಿಷ್ಕರಿಸಿದ್ದರು. ಈ ಕಾರಣದಿಂದ ಗ್ರಾಮಸ್ಥರ ಮೇಲೆ ಸಚಿವರು ಕೆಂಡಕಾರಿದ್ದಾರೆ.
"ಇಲ್ಲೋರ್ವ ಎಂಎಲ್ಎ ಇದ್ದಾನೆ. ಯಾವ ನನ್ಮಗನಾದ್ರು ನನ್ನ ಬಳಿ ಬಂದು ನೀರಿನ ಸಮಸ್ಯೆ ಇದೆ ಬಗೆಹರಿಸಿ ಎಂದು ಕೇಳಿದ್ದೀರಾ?. ಒಂದು ವೇಳೆ ಸಮಸ್ಯೆಯನ್ನು ಹೇಳಿ ಅರ್ಜಿ ನೀಡಿ ಸಮಸ್ಯೆಯನ್ನು ಪರಹರಿಸದೇ ಇರುತ್ತಿದ್ದಲ್ಲಿ ಚುನಾವಣೆ ಬಹಿಷ್ಕರಿಸುವುದಕ್ಕೆ ಗೌರವವಿರುತ್ತಿತ್ತು. ಇಡೀ ಜಿಲ್ಲೆಯಲ್ಲೇ ಈ ಪಂಚಾಯತ್ ಅನ್ನು ಕೆಟ್ಟ ಪಂಚಾಯತಾಗಿ ಮಾಡಿದ್ದೀರಿ" ಎಂದು ಕಿಡಿಕಾರಿದ್ದಾರೆ.
ಜನರು ಮತ ಚಲಾಯಿಸುತ್ತಿದ್ದರು. ಆದರೆ, ನೀನೆ ಮಾಡಿರುವುದು ಎಂದು ಸಚಿವರು ಗ್ರಾಮದ ಮುಖಂಡರೋರ್ವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಸಂದರ್ಭ ಅವರು ಇಲ್ಲ ಎನ್ನಲು ಮುಂದಾದಾಗ, "ನನಗೆ ಈ ಬಗ್ಗೆ ಮಾಹಿತಿ ಇದೆ. ಯಾರ ಕೈಯಿಂದ ನೀರು ಪೂರೈಕೆ ಮಾಡಿಸಿಕೊಳ್ಳುತ್ತೀರಾ ನಾನು ನೋಡುತ್ತೇನೆ" ಎಂದಿದ್ದಾರೆ.
ಸರ್ ನೀರಿನ ಸಮಸ್ಯೆ ಇದೆ. ಹಾಗಾಗಿ ಕಳೆದ ವರ್ಷ ನಾವು ಟ್ಯಾಂಕರ್ ಮೂಲಕ ನೀರು ಪಡೆದುಕೊಂಡಿದ್ದೆವು ಎಂದು ಗ್ರಾಮಸ್ಥರು ಹೇಳಿದಾಗ, "ಈ ವಿಚಾರದ ಬಗ್ಗೆ ನನ್ನ ಬಳಿ ಯಾರಾದರೂ ಬಂದು ಹೇಳಿದ್ದೀರಾ?" ಎಂದು ಪ್ರಶ್ನಿಸಿದ್ದಾರೆ.