ನವದೆಹಲಿ, ಜ. 17 (DaijiworldNews/MB) : ದೆಹಲಿಯಲ್ಲಿ ಜನವರಿ 26ರಂದು ಆಯೋಜಿಸಿರುವ ರ್ಯಾಲಿಯಲ್ಲಿ ಪಾಲ್ಗೊಳ್ಳುವ ನಿಟ್ಟಿನಲ್ಲಿ ಸಾವಿರಾರು ರೈತರು ಪಂಜಾಬ್ನ ಲುಧಿಯಾನದಿಂದ ಟ್ರ್ಯಾಕ್ಟರ್ ಸಹಿತ ರಾಷ್ಟ್ರ ರಾಜಧಾನಿ ದೆಹಲಿಯೆಡೆ ಪ್ರಯಾಣ ಆರಂಭಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ರೈತ ಮುಖಂಡ ಜೋಗಿಂದರ್ ನೇನ್, ''ರ್ಯಾಲಿಯಲ್ಲಿ ಸುಮಾರು 1 ಲಕ್ಷ ಟ್ರ್ಯಾಕ್ಟರ್ಗಳು ಇರಲಿದೆ. ಹರ್ಯಾಣದ ಪ್ರತಿ ಮನೆಯಿಂದ ಒಬ್ಬರು, ಪ್ರತಿ ಹಳ್ಳಿಯಿಂದ 10 ಟ್ರ್ಯಾಕ್ಟರ್ ಹಾಗೂ ಪ್ರತಿ ಊರಿನಿಂದ 11 ಮಹಿಳೆಯರು ರ್ಯಾಲಿಗೆ ಬರಲು ಮನವಿ ಮಾಡಲಾಗಿದೆ'' ಎಂದು ತಿಳಿಸಿದ್ದಾರೆ.
ಈ ನಡುವೆ ಗಣರಾಜ್ಯೋತ್ಸವ ದಿನದಂದು ದೆಹಲಿಯಲ್ಲಿ ಯಾವುದೇ ಪ್ರತಿಭಟನೆ, ಜಾಥಾ ನಡೆಸಬಾರದೆಂದು ಆದೇಶ ನೀಡುವಂತೆ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್ಗೆ ಮನವಿ ಸಲ್ಲಿಸಿದೆ. ಆದರೆ ಲೋಕಶಕ್ತಿ ಸಂಘಟನೆಯು ಈ ಅರ್ಜಿ ರದ್ದು ಮಾಡುವಂತೆಯೂ ತಿಳಿಸಿದೆ.
ಏತನ್ಮಧ್ಯೆ ವಿವಾದಿತ ಕೃಷಿ ಕಾಯ್ದೆ ಸೇರಿದಂತೆ ದೆಹಲಿಯ ಗಡಿಯಲ್ಲಿ ರೈತರು ನಡೆಸುತ್ತಿರುವ ಹೋರಾಟದ ಬಗ್ಗೆ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್ ಸೋಮವಾರ ನಡೆಸಲಿದೆ.
ಕಳೆದ ಒಂದೂವರೆ ತಿಂಗಳಿನಿಂದ ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ದೆಹಲಿಯ ಹಲವು ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರು ಹಾಗೂ ಸರ್ಕಾರದ ನಡುವೆ ನಡೆದ ಎಂಟು ಸುತ್ತಿನ ಮಾತುಕತೆಗಳು ಕೂಡಾ ವಿಫಲಾಗಿತ್ತು. ಇತ್ತೀಚೆಗೆ ನಡೆದ 9ನೇ ಸುತ್ತಿನ ಮಾತುಕತೆಯೂ ವಿಫಲವಾಗಿದೆ. ಇನ್ನು ಜನವರಿ 19ಕ್ಕೆ 10ನೇ ಸುತ್ತಿನ ಮಾತುಕತೆ ನಡೆಯಲಿದೆ.