ಬಾಗಲಕೋಟೆ, ಜ.17 (DaijiworldNews/HR): "ಕೇಂದ್ರದ ಎಲ್ಲಾ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಿದ್ದು, ರೈತರು- ಜನರ ಅಭಿವೃದ್ದಿಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಯಾವುದೇ ರೀತಿಯಲ್ಲೂ ಹಿಂದೆ ಬಿದ್ದಿಲ್ಲ, ಅವರು ಉತ್ತಮ ಆಡಳಿತ ನೀಡುತ್ತಿದ್ದಾರೆ" ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಈ ಕುರಿತು ಕೆರಕಲಮಟ್ಟಿಯಲ್ಲಿ ನಿರಾಣಿ ಸಂಸ್ಥೆಯ ಕಾರ್ಖಾನೆಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, "ಬಾಗಲಕೋಟೆ ಜನರು ರೈತರು ಕೃಷಿಯನ್ನೇ ಅವಲಂಬಿಸಿದ್ದು, ಈ ಭಾಗದ ರೈತರಿಗೆ ಕೋಟಿ ಕೋಟಿ ವಂದನೆಗಳು. ಮಕರ ಸಂಕ್ರಾಂತಿ ರೈತರ ಪಾಲಿನ ದೊಡ್ಡ ಹಬ್ಬ, ಸೂರ್ಯ ಪಥ ಬದಲಿಸುವ ಸಮಯ. ರೈತರಿಗೆ ಸಂಕ್ರಾಂತಿಯ ಶುಭಾಶಯಗಳು" ಎಂದರು.
ಇನ್ನು "ಕರ್ನಾಟಕದ ಜನರು 2014-2019 ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪೂರ್ಣ ಬಹುಮತ ಕೊಟ್ಟಿದ್ದು, ಮುಂಬೈ ಕರ್ನಾಟಕ ಕೂಡ ಬಿಜೆಪಿಯನ್ನ ಬೆಂಬಲಿಸುತ್ತ ಬಂದಿದೆ. ನಾವು ಅವರಿಗೆ ಆಭಾರಿಯಾಗಿದ್ದೇವೆ" ಎಂದರು.
ರೈತರ ಪರವಾಗಿ ಮಾತನಾಡುತ್ತಿರುವ ಕಾಂಗ್ರೆಸ್ ನಾಯಕರಿಗೊಂದು ಪ್ರಶ್ನೆ ಕೇಳಲು ಇಚ್ಛಿಸುತ್ತೇನೆಂದ ಶಾ, "ನೀವೇಕೆ ರೈತರಿಗೆ ವರ್ಷಕ್ಕೆ ರೂ. 6,000 ಗಳನ್ನು ನೀಡಲಿಲ್ಲ? ನೀವು ಅಧಿಕಾರದಲ್ಲಿದ್ದಾಗ ಪ್ರಧಾನ್ ಮಂತ್ರಿ ಫಸಲ್ ಭೀಮಾ ಯೋಜನೆ ಅಥವಾ ಎಥೆನಾಲ್ ನೀತಿಯನ್ನೇ ತಿದ್ದುಪಡಿ ಮಾಡಲಿಲ್ಲ? ಏಕೆಂದರೆ ನಿಮ್ಮ ಉದ್ದೇಶ ಸರಿಯಾಗಿಲ್ಲ" ಎಂದು ಹೇಳಿದ್ದಾರೆ.