ನವದೆಹಲಿ, ಜ.17 (DaijiworldNews/PY): ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆ ವಿರುದ್ದ ದೆಹಲಿ ಗಡಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಯ ವಿಚಾರವಾಗಿ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ಸೋಮವಾರ ನಡೆಸಲಿದೆ.
ಭಾರತೀಯ ಕಿಸಾನ್ ಯೂನಿಯನ್ ಅಧ್ಯಕ್ಷ ಭೂಪಿಂದರ್ ಸಿಂಗ್ ಈ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಕೇಂದ್ರದ ಹೊಸ ಕೃಷಿ ಕಾಯ್ದೆಗಳಿಂದಾದ ಬಿಕ್ಕಟ್ಟಿನ ಪರಿಹಾರಕ್ಕೆಂದು ಸುಪ್ರೀಂ ನೇಮಕ ಮಾಡಿರುವ ನಾಲ್ವರು ಸದಸ್ಯರ ಸಮಿತಿಯಿಂದ ಹೊರಬರುವುದಾಗಿ ತಿಳಿಸಿದ್ದರು.
ಈ ವಿಚಾರದ ಬಗೆಗಿನ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಎಲ್. ನಾಗೇಶ್ವರ್ ರಾವ್ ಹಾಗೂ ವಿನೀತ್ ಸರಣ್ ಅವರನ್ನೊಳಗೊಂಡ ಪೀಠ ನಡೆಸಲಿದೆ. ಇದರೊಂದಿಗೆ ಮಾನ್ ಅವರ ಬದಲಿಗೆ ಮತ್ತೋರ್ವ ಸದಸ್ಯರನ್ನು ನೇಮಕ ಮಾಡುವ ಸಾಧ್ಯತೆ ಇದೆ.
ಸುಪ್ರೀಂ ನೇಮಕ ಮಾಡಿರುವ ನಾಲ್ವರು ಸದಸ್ಯರ ಸಮಿತಿಯಲ್ಲಿ ಇತರೆ ಮೂರು ಮಂದಿ ಕೃಷಿ ಕಾಯ್ದೆಗಳಿಗೆ ಬೆಂಬಲ ನೀಡುತ್ತಿದ್ದು, ಈ ಕಾರಣದಿಂದ ಅವರನ್ನುಆ ಸಮಿತಿಯಿಂದ ಕೈಬಿಟ್ಟು ಈ ಸಮಸ್ಯೆಯನ್ನು ಯಾರು ಸೌಹಾರ್ದಯುತ ರೀತಿಯಲ್ಲಿ ಬಗೆಹರಿಸುತ್ತಾರೋ ಅಂತಹ ತಜ್ಞರನ್ನು ನೇಮಕ ಮಾಡಬೇಕು ಎಂದು ಭಾರತೀಯ ಕಿಸಾನ್ ಯೂನಿಯನ್ ಲೋಕಶಕ್ತಿ ಸಂಘಟನೆಯು ಶನಿವಾರದಂದು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿತ್ತು.
ಈ ಸಂದರ್ಭ, ರೈತ ಸಂಘಟನೆಗಳು ಜ.26ರಂದು ನಡೆಸಲು ತಿರ್ಮಾನಿಸಿರುವ ಟ್ರ್ಯಾಕ್ಟರ್ ರ್ಯಾಲಿಗೆ ತಡೆಯಾಜ್ಞೆ ನೀಡಬೇಕು ಎಂದು ದೆಹಲಿ ಪೊಲೀಸ್ ಮೂಲಕ ಕೇಂದ್ರ ಸರ್ಕಾರ ಸಲ್ಲಿಸಿರುವ ಅರ್ಜಿಯ ವಿಚಾರಣೆ ಕೂಡಾ ನಡೆಯಲಿದೆ.