ಬೆಳಗಾವಿ, ಜ. 17 (DaijiworldNews/MB) : ''ವಿಪಕ್ಷ ನಾಯಕ ಸಿದ್ದರಾಮಯ್ಯ ಎಲ್ಲಿಂದ ಬಂದವರು, ಅವರೇನು ಆರ್ಎಸ್ಎಸ್ಎಸ್ ಮೂಲದವರಾ'' ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರಶ್ನಿಸಿದರು.
ಭಾನುವಾರ ಮಾಧ್ಯಮದೊಂದಿಗೆ ಮಾತನಾಡಿದ ಸಂದರ್ಭ, 'ಮುಖ್ಯಮಂತ್ರಿ ಬದಲಾವಣೆ ಎಪ್ರಿಲ್ನಲ್ಲಿ ಆಗುತ್ತೆ. ಆರ್ಎಸ್ಎಸ್ ಮೂಲದಿಂದ ಈ ಮಾಹಿತಿ ಲಭಿಸಿದೆ' ಎಂಬ ಸಿದ್ದರಾಮಯ್ಯನವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ''ಸಿದ್ದರಾಮಯ್ಯ ಏನು ಆರ್ಎಸ್ಎಸ್ ಮೂಲದವರಾ? ಅಷ್ಟಕ್ಕೂ ಅವರ ಹೇಳಿಕೆಯ ಮೂಲವಾದರೂ ಯಾವುದು'' ಎಂದು ಕೇಳಿದರು.
''ಮೊದಲು ಸಿದ್ದರಾಮಯ್ಯನವರು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಜೊತೆ ಫೋನ್ನಲ್ಲಿ ಸರಿಯಾದ ಸಂಪರ್ಕ ಹೊಂದಲು ಹೇಳಬೇಕು. ಸಿದ್ದರಾಮಯ್ಯರಿಗೆ ಅವರ ನಾಯಕರೊಂದಿಗೆಯೇ ಸರಿಯಾಗಿ ಸಂಪರ್ಕವಿಲ್ಲ. ಮತ್ತೆ ಆರ್ಎಸ್ಎಸ್ನವರ ಸಂಪರ್ಕ ಹೇಗೆ ಮಾಡಿಯಾರು'' ಎಂದು ಲೇವಡಿ ಮಾಡಿದರು.
''ಸಿದ್ದರಾಮಯ್ಯ ಸೇರಿದಂತೆ ಯಾರು ಏನೇ ಹೇಳಿದರೂ ಬಿಎಸ್ವೈ ನಾಯಕತ್ವವನ್ನು ಬದಲು ಮಾಡುವ ವಿಷಯವೇ ಇಲ್ಲ. ನಮ್ಮ ಪಕ್ಷದವರು ಆ ಹೇಳಿಕೆ ನೀಡಿದರೆ ನಾನು ಅದಕ್ಕೆ ಪ್ರತಿಕ್ರಿಯೆ ನೀಡಬಹುದು'' ಎಂದು ಹೇಳಿದರು.