ಕಾಸರಗೋಡು, ಜ. 17 (DaijiworldNews/MB) : ಮಲಬಾರ್ ಎಕ್ಸ್ಪ್ರೆಸ್ ರೈಲಿನಲ್ಲಿ ಉಂಟಾದ ಬೆಂಕಿ ಆಕಸ್ಮಿಕಕ್ಕೆ ಪಾರ್ಸೆಲ್ನಲ್ಲಿದ್ದ ಬೈಕ್ಗಳು ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದ್ದು, ಘಟನೆಗೆ ಸಂಬಂಧಪಟ್ಟಂತೆ ಕಾಸರಗೋಡು ಸ್ಟೇಷನ್ನ ಪಾರ್ಸೆಲ್ ಮೇಲ್ವಿಚಾರಕನನ್ನು ಅಮಾನತುಗೊಳಿಸಲಾಗಿದೆ.
ಬೈಕ್ ಲೋಡ್ ಮಾಡಿದ ಜವಾಬ್ದಾರಿ ಹೊಂದಿದ್ದ ಕಮರ್ಷಿಯಲ್ ಸೂಪರ್ ವೈಸರ್ ನನ್ನು ಪಾಲಕ್ಕಾಡ್ ರೈಲ್ವೆ ವಿಭಾಗೀಯ ಅಧಿಕಾರಿಗಳು ಅಮಾನತು ಮಾಡಿದ್ದಾರೆ.
ಈ ಬೈಕ್ನಿಂದ ಬೆಂಕಿ ಹರಡಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ಸ್ಪಷ್ಟಗೊಂಡಿದೆ. ಕಾಸರಗೋಡು ರೈಲು ನಿಲ್ದಾಣದಿಂದ ತಿರುವನಂತಪುರ ಪಾರಶಾಲಾ ಎಂಬಲ್ಲಿಗೆ ಎರಡು ಬೈಕ್ ಗಳನ್ನು ಹತ್ತಿಸಲಾಗಿತ್ತು. ಈ ಬೈಕ್ನಲ್ಲಿದ್ದ ಪೆಟ್ರೋಲ್ ಮೂಲಕ ಬೆಂಕಿ ಹತ್ತಿರಬಹುದು ಎಂದು ಶಂಕಿಸಲಾಗಿದ್ದು, ಈ ಹಿನ್ನಲೆಯಲ್ಲಿ ಪಾರ್ಸೆಲ್ ಉಸ್ತುವಾರಿ ಹೊಂದಿದ್ದ ನೌಕರನನ್ನು ಅಮಾನತು ಮಾಡಲಾಗಿದೆ ಬೈಕ್ಗಳನ್ನು ಪಾರ್ಸೆಲ್ನಲ್ಲಿ ಕಳುಹಿಸುವ ಮೊದಲು ಪೆಟ್ರೋಲನ್ನು ಸಂಪೂರ್ಣವಾಗಿ ಖಾಲಿ ಮಾಡಬೇಕು ಎಂಬ ನಿಯಮದಲ್ಲಿ ಲೋಪ ಕಂಡು ಬಂದಿದೆ ಎಂದು ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ.
ಇಂದು ಬೆಳಿಗ್ಗೆ ತಿರುವನಂತಪುರದ ವರ್ಕಳದಲ್ಲಿ ಘಟನೆ ನಡೆದಿತ್ತು. ಮಂಗಳೂರಿನಿಂದ ತಿರುವನಂತಪುರಕ್ಕೆ ತೆರಳುತ್ತಿದ್ದ ಮಲಬಾರ್ ಎಕ್ಸ್ ಪ್ರೆಸ್ ರೈಲು ತಿರುವನಂತಪುರ ತಲುಪಲು 40 ಕಿ. ಮೀ. ದೂರದಲ್ಲಿದ್ದಾಗ ಬೆಂಕಿ ಆಕಸ್ಮಿಕ ನಡೆದಿದೆ. ಪಾರ್ಸೆಲ್ ಬೋಗಿಯಲ್ಲಿ ಅನಾಹುತ ನಡೆದ ಹಿನ್ನೆಲೆಯಲ್ಲಿ ಯಾರಿಗೂ ಅಪಾಯವಾಗಿಲ್ಲ. ಪಾರ್ಸೆಲ್ ಬೋಗಿಯಲ್ಲಿ ಹೊಗೆಯನ್ನು ಗಮನಿಸಿ ರೈಲು ನಿಲುಗಡೆಗೊಳಿಸಿ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಯಿತು. ಸ್ಥಳಕ್ಕೆ ತಲುಪಿದ ಅಗ್ನಿಶಾಮಕದಳದ ಸಿಬ್ಬಂದಿಗಳು ಬೆಂಕಿಯನ್ನು ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದರು.