ನವದೆಹಲಿ, ಜ.17 (DaijiworldNews/PY): ದೇಶದ ವಿವಿಧ ಭಾಗಗಳಿಂದ ಏಕತಾ ಪ್ರತಿಮೆ ಇರುವ ಗುಜರಾತ್ನ ಕೆವಡಿಯಾಗೆ ಸಂಚರಿಸುವ ಎಂಟು ರೈಲುಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ರವಿವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದ್ದಾರೆ.
ವಾರದಲ್ಲಿ ಒಂದು ದಿನ ಕೆವಾಡಿಯಾ-ವಾರಣಾಸಿ ಮಹಾಮಣ ಎಕ್ಸ್ಪ್ರೆಸ್, ದೈನಂದಿನ ದಾದರ್-ಕೆವಾಡಿಯಾ ಎಕ್ಸ್ಪ್ರೆಸ್, ಪ್ರತಿದಿನ ಅಹಮದಾಬಾದ್-ಕೆವಾಡಿಯಾ ಜನಶತಾಬ್ದಿ ಎಕ್ಸ್ಪ್ರೆಸ್, ವಾರಕ್ಕೆ ಎರಡು ಬಾರಿ ನಿಜಾಮುದ್ದೀನ್ - ಕೆವಾಡಿಯಾ ಎಕ್ಸ್ಪ್ರೆಸ್, ವಾರದಲ್ಲಿ ಒಂದು ದಿನ ಕೆವಾಡಿಯಾ - ರೇವಾ ಎಕ್ಸ್ಪ್ರೆಸ್, ಚೆನ್ನೈ - ಕೆವಾಡಿಯಾ ಎಕ್ಸ್ಪ್ರೆಸ್, ದೈನಂದಿನ ಪ್ರತಾಪನಗರ-ಕೆವಾಡಿಯಾ ಎಂಇಎಂಯು ರೈಲು, ಕೆವಾಡಿಯಾ-ಪ್ರತಾಪನಗರ ಎಂಇಎಂಯು ರೈಲುಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ರವಿವಾರ ಚಾಲನೆ ನೀಡಿದ್ದಾರೆ.
ಚಾಲನೆ ನೀಡಿದ ಬಳಿಕ ಮಾತನಾಡಿದ ಪ್ರಧಾನಿ ಮೋದಿ, "ದೇಶದ ವಿವಿಧ ಭಾಗಗಳಿಂದ ಏಕತಾ ಪ್ರತಿಮೆ ನೋಡಲು ಬರುತ್ತಾರೆ. ಈ ನಿಟ್ಟಿನಲ್ಲಿ ದೇಶದ ವಿವಿಧ ಭಾಗಗಳಿಂದ ಎಂಟು ನೂತನ ರೈಲುಗಳಿಗೆ ಚಾಲನೆ ನೀಡಲಾಗಿದೆ. ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವ ಕಾರಣ ಸ್ಥಳೀಯ ಉದ್ಯೋಗ ಸೃಷ್ಟಿಗೂ ಕೂಡಾ ಅವಕಾಶ ನೀಡುತ್ತದೆ. ಇದರೊಂದಿಗೆ ಕೇವಾಡಿಯಾದ ಆದಿವಾಸಿ ಜನರ ಬದುಕು ಕೂಡಾ ಬದಲಾವಣೆಯಾಗಲಿದೆ" ಎಂದಿದ್ದಾರೆ.
"ಈಗಾಗಲೇ ಏಕತಾ ಪ್ರತಿಮೆಯ ನಿರ್ಮಾಣದಿಂದ ಕೇವಾಡಿಯಾದ ಚಹರೆ ಬದಲಾವಣೆಯಾಗಿದೆ. ಪ್ರಸ್ತುತ ನೂತನ ರೈಲುಗಳ ಸಂಚಾರದಿಂದ ಕೇವಾಡಿಯಾದ ಆರ್ಥಿಕ ಅಭಿವೃದ್ದಿ, ಪ್ರವಾಸೋದ್ಯಮವೂ ಕೂಡಾ ಜೊತೆಯಾಗಿ ಸಾಗಲಿದೆ" ಎಂದು ತಿಳಿಸಿದ್ದಾರೆ.