ಬೀದರ್,ಜ.17 (DaijiworldNews/HR): "ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿರುದ್ಧ ಬ್ಲ್ಯಾಕ್ಮೇಲ್ ಮೂಲಕ ಸಚಿವ ಸ್ಥಾನ ಪಡೆದಿರುವುದು ಪ್ರಜಾಪ್ರಭುತ್ವಕ್ಕೆ ಕಪ್ಪು ಮಸಿ ಬಳೆದ ಘಟನೆಯಾಗಿದ್ದು, ಈ ಕುರಿತು ಸಿಬಿಐ ತನಿಖೆ ನಡೆಸಿ ಸತ್ಯಾಂಶ ಹೊರತರಬೇಕು" ಎಂದು ಮಾಜಿ ಸಚಿವ ಶರಣ ಪ್ರಕಾಶ ಪಾಟೀಲ ಆಗ್ರಹಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಶಾಸಕರು ಸಿ.ಡಿ. ಮೂಲಕ ಸಚಿವ ಸ್ಥಾನ ಪಡೆದಿದ್ದಾರೆ ಎಂದು ಬಿಜೆಪಿ ಪಕ್ಷದ ಹಿರಿಯ ಶಾಸಕರೇ ಆರೋಪ ಮಾಡಿದ್ದಾರೆ ಹೊರತು ಕಾಂಗ್ರೆಸ್ ಅಲ್ಲ. ಬ್ಲ್ಯಾಕ್ ಮೆಲ್ ಘಟನೆ ರಾಜಕಾರಣಿಗಳ ಬಗ್ಗೆ ಜನರಿಗೆ ಅಪಹಾಸ್ಯ ಮೂಡುವಂತಾಗಿದೆ" ಎಂದರು.
ಇನ್ನು "ಪ್ರಧಾನಿ ನರೇಂದ್ರ ಮೋದಿ ನೀತಿಗಳ ಬಗ್ಗೆ ಮಾತನಾಡುತ್ತಾರೆ ಆದರೆ ಅವರು ಸಿಬಿಐ ಮೂಲಕ ವಿರೋಧ ಪಕ್ಷಗಳನ್ನು ಹಿಮ್ಮೆಟ್ಟಲು ಪ್ರಯತ್ನಿಸುತ್ತಿದ್ದಾರೆ. ನಿಜವಾಗಿ ಬಿಜೆಪಿಗೆ ನೈತಿಕತೆ ಇದ್ದಲ್ಲಿ ಈ ಘಟನೆ ಬಗ್ಗೆ ಸಿಬಿಐ ತನಿಖೆ ನಡೆಸಬೇಕು" ಎಂದು ಒತ್ತಾಯಿಸಿದ್ದಾರೆ.