ಬೆಂಗಳೂರು, ಜ.17 (DaijiworldNews/PY): "ಕುರುಬ ಸಮುದಾಯವನ್ನು ಎಸ್.ಟಿ ಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಿ ನಡೆಯುತ್ತಿರುವ ಹೋರಾಟ ಸಿದ್ದರಾಮಯ್ಯ ಅವರು ಬರುವುದಾದರೆ ಬರಲಿ. ಅನಗತ್ಯವಾಗಿ ಗೊಂದಲ ಸೃಷ್ಟಿಸುವುದು ಬೇಡ" ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಯಾರು ಏನೇ ಹೇಳಲಿ. ಆ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಈ ಹೋರಾಟದಲ್ಲಿ ನಾನಂತೂ ಭಾಗವಹಿಸುತ್ತೇನೆ. ಪಾದಯಾತ್ರೆ ಕಾಗಿನೆಲೆಯಿಂದ ಆರಂಭವಾಗಿದ್ದು, ಬೆಂಗಳೂರಿನಲ್ಲಿ ಫೆ.7ರಂದು ಬೃಹತ್ ಸಮಾವೇಶ ನಡೆಯಲಿದೆ. ಆದರೆ, ಈ ಬೃಹತ್ ಸಮಾವೇಶಕ್ಕೆ ಸಿದ್ದರಾಮಯ್ಯ ಅವರು ಬರುತ್ತಾರೋ ಇಲ್ಲವೋ ತಿಳಿದಿಲ್ಲ" ಎಂದರು.
"ಎಸ್.ಟಿ ಹೋರಾಟದ ಹಿಂದೆ ಆರ್ಎಸ್ಎಸ್ ಇದೆ. ಪಾದಯಾತ್ರೆ ಏಕೆ ಮಾಡಬೇಕು ಎನ್ನುವುದು ಏಕೆ?. ಹೋರಾಟಕ್ಕೆ ಆಸಕ್ತಿ ಇದ್ದವರು ಬನ್ನಿ ಸುಖಾಸಮ್ಮನೆ ಗೊಂದಲ ಸೃಷ್ಟಿಸುವುದು ಏಕೆ?. ಈ ವಿಚಾರವಾಗಿ ಸಿದ್ದರಾಮಯ್ಯ ಮಾಡುತ್ತಿರುವುದು ಸರಿಯಲ್ಲ. ಕುರುಬ ಸಮುದಾಯಕ್ಕೆ ಎಸ್.ಟಿ ಮಾನ್ಯತೆ ಸಿಗುವ ಭರವಸೆ ಇದೆ" ಎಂದು ಹೇಳಿದರು.
"ಸಿದ್ದರಾಮಯ್ಯ ಅವರು ಸಿಎಂ ಆಗಿದ್ದ ಸಂದರ್ಭ ಏಕೆ ಮಾಡಿಲ್ಲ. ಯಾರೂ ಏನೇ ಅಂದರೂ ನಾನಂತೂ ಹೋರಾಟದಲ್ಲಿ ಇರುತ್ತೇನೆ" ಎಂದರು.
ಬಿಜೆಪಿ ಪ್ರಮುಖರ ಸಭೆಯಲ್ಲಿ ಅಮಿತ್ ಶಾ ಮಾರ್ಗದರ್ಶನ ನೀಡಿದ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಮುಂಬರುವ ಚುನಾವಣೆಯಲ್ಲಿ ಮತ್ತೆ ಮತ್ತೆ ಅಧಿಕಾರಕ್ಕೆ ತರಬೇಕೆಂದಿದ್ದಾರೆ. ಪಕ್ಷವು ಸ್ವತಂತ್ರವಾಗಿ ಪೂರ್ಣ ಪ್ರಮಾಣದಲ್ಲಿ ವಿಜಯ ಸಾಧಿಸಬೇಕು. ಈ ಸಲುವಾಗಿ ಕಾರ್ಯ ನಿರ್ವಹಿಸುವಂತೆ ತಿಳಿಸಿದ್ದಾರೆ" ಎಂದು ಹೇಳಿದರು.