ಬೆಳಗಾವಿ, ಜ. 17 (DaijiworldNews/MB) : ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬೆಳಗಾವಿಗೆ ಭೇಟಿ ನೀಡಿದ್ದು, ಈ ವೇಳೆ ಸಂಘಟನೆಗಳು ಕೇಂದ್ರ ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸಿದ್ದು ಅಮಿತ್ ಶಾ ಅವರು ಬಹಿರಂಗವಾಗಿ ಚರ್ಚೆಗೆ ಬರಬೇಕು ಎಂದು ಆಗ್ರಹಿಸಿದ್ದಾರೆ. ಪ್ರತಿಭಟನೆ ನಡೆಸುತ್ತಿದ್ದ ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನಗರದ ರಾಣಿ ಚನ್ನಮ್ಮ ವೃತ್ತದಲ್ಲಿ ಬೆಳ್ಳಿಗೆಯೇ ರೈತ ಮುಖಂಡರು ಸೇರಿದ್ದು ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳು ರೈತ ವಿರೋಧಿ ಎಂದು ಕೇಂದ್ರ ಸರ್ಕಾರದ ವಿರುದ್ದ ಹಾಗೂ ಕೃಷಿ ಕಾಯ್ದೆಗಳ ವಿರುದ್ದ ಧಿಕ್ಕಾರ ಕೂಗಿದರು. ಅಷ್ಟೇ ಅಲ್ಲದೇ ಈ ಸಂದರ್ಭದಲ್ಲಿ ಇಬ್ಬರು ರೈತರು ಅರೆಬೆತ್ತಲೆಯಾಗಿ ಉರುಳುಸೇವೆ ಮಾಡಿದರು. ರ್ಯಾಲಿ ನಡೆಸಿ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ತೆರಳಿ ಅಲ್ಲಿ ಧರಣಿ ನಡೆಸಿದರು.
''ದೆಹಲಿಯಲ್ಲಿ ನಲ್ವತ್ತು ದಿನಕ್ಕಿಂತಲ್ಲೂ ಅಧಿಕ ಕಾಲದಿಂದ ಕೇಂದ್ರದ ಕೃಷಿ ಕಾಯ್ದೆ ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದರೂ ಕೂಡಾ, ಸರ್ಕಾರ ರೈತರಿಗೆ ಸ್ಪಂಧಿಸುತ್ತಿಲ್ಲ. ಬೇಡಿಕೆ ಈಡೇರಿಸುವ ಕ್ರಮವನ್ನೂ ಸರ್ಕಾರ ಕೈಗೊಂಡಿಲ್ಲ. ದೇಶದ ಬೆನ್ನಲುಬಾಗಿರುವ ರೈತರ ವಿಷಯದಲ್ಲೂ ಸರ್ಕಾರ ಇಷ್ಟೊಂದು ಮೊಂಡುತನ ತೋರಿಸುವುದು ಸರಿಯಲ್ಲ'' ಎಂದು ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೈತ ಮುಖಂಡರು ಗೋ ಬ್ಯಾಕ್ ಅಮಿತ್ ಶಾ ಎಂದು ಘೋಷಣೆಗಳನ್ನೂ ಕೂಗಿದರು. ಈ ಸಂದರ್ಭದಲ್ಲಿ ಪೊಲೀಸರು ರಾಜ್ಯ ಸಂಚಾಲಕರಾದ ಚೂನಪ್ಪ ಪೂಜಾರಿ, ಜಯಶ್ರೀ ಗುರಣ್ಣವರ, ಜಿಲ್ಲಾ ಘಟಕದ ಅಧ್ಯಕ್ಷ ರಾಘವೇಂದ್ರ ನಾಯ್ಕ, ಮುಖಂಡ ಪ್ರಕಾಶ ನಾಯ್ಕ ಮುಂತಾದವರನ್ನು ವಶಕ್ಕೆ ಪಡೆದು, ಹಿರೇಬಾಗೇವಾಡಿ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ ಎಂದು ವರದಿಯಾಗಿದೆ.