ಉಡುಪಿ, ಜ.17 (DaijiworldNews/PY): ಆಂಧ್ರ ಪ್ರದೇಶದ ವಿಜಯನಗರಂ ಜಿಲ್ಲೆಯ ಪ್ರಾಚೀನ ಸೀತಾ ಲಕ್ಷ್ಮಣ ಕೋದಂಡರಾಮ ದೇವಸ್ಥಾನದಲ್ಲಿ ರಾಮ ವಿಗ್ರಹವನ್ನು ಅಪವಿತ್ರಗೊಳಿಸಿದ್ದು, ಅಂಥವರ ವಿರುದ್ದ ಸೂಕ್ತವಾದ ಕ್ರಮ ಕೈಗೊಳ್ಳುವಂತೆ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ.
"ಆಂಧ್ರದಲ್ಲಿನ ರಾಮತೀರ್ಥ ದೇವಸ್ಥಾನದಲ್ಲಿ ದುಷ್ಕರ್ಮಿಗಳು ಭಗ್ನಗೊಳಿಸಿ, ಸಮುದ್ರಕ್ಕೆ ಎಸೆದಿದ್ದಾರೆ. 20 ದಿನಗಳ ಹಿಂದೆ ನಡೆದ ಈ ಘಟನೆಯ ಬಗ್ಗೆ ಆಂಧ್ರ ಪ್ರದೇಶ ಸರ್ಕಾರ ಇದುವರೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಈ ಘಟನೆಯ ಬಗ್ಗೆ ತೀವ್ರ ತನಿಖೆ ಮಾಡಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು" ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
"ಕಳೆದ ಒಂದೂವರೆ ವರ್ಷದಿಂದ ಆಂಧ್ರಪ್ರದೇಶದ ದೇವಾಲಯದಲ್ಲಿ ವಿಧ್ವಂಸಕ ಕೃತ್ಯಗಳು ನಡೆಯುತ್ತಿವೆ. ದೇಗುಲದ ವಿಗ್ರಹಗಳನ್ನು ಧ್ವಂಸಗೊಳಿಸುವುದು, ಅರ್ಚಕರಿಗೆ ಹಲ್ಲೆ ಮಾಡುವುದು, ದೇವಾಲಯದ ರಥಗಳನ್ನು ಸುಟ್ಟು ಹಾಕುವುದು, ದೇಗುಲದ ಸಂಪತನ್ನು ದರೋಡೆ ಮಾಡುವುದು ಇಂತಹ ಕೃತ್ಯಗಳು ನಡೆಯುತ್ತಿವೆ. ಈ ಕೃತ್ಯಗಳು ಪೂರ್ವನಿಯೋಜಿತ ಎಂದು ಕಂಡುಬರುತ್ತಿವೆ. ಈ ಬಗ್ಗೆ ಸೂಕ್ತವಾದ ಕ್ರಮ ತೆಗೆದುಕೊಳ್ಳಬೇಕು. ದೇವಾಲಯಗಳಿಗೆ ಸೂಕ್ತ ಭದ್ರತೆ ನೀಡಬೇಕು" ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.
"ದುಷ್ಕರ್ಮಿಗಳ ವಿರುದ್ದ ಯಾವುದೇ ಕ್ರಮ ಕೈಗೊಂಡಿಲ್ಲ. ಈ ದುಷ್ಕೃತ್ಯಗಳನ್ನು ಆಶ್ರಯಿಸುತ್ತಿದ್ದಾರೆ. ದೇವಾಲಯದ ವಿಧ್ವಂಸಕ ಕೃತ್ಯಗಳ ಹಿಂದಿನ ಜನರನ್ನು ಪತ್ತೆಹಚ್ಚಲು ಮತ್ತು ಬಂಧಿಸಲು ಯಾವುದೇ ಗಂಭೀರ ಕ್ರಮಗಳನ್ನು ತೆಗೆದುಕೊಳ್ಳಲಾಗಿಲ್ಲ. ರಾಜ್ಯ ಆಡಳಿತವು ಕರೆಗೆ ಸ್ಪಂದಿಸಲಿಲ್ಲ" ಎಂದು ತಿಳಿಸಿದ್ದಾರೆ.
"ಈ ಬಗ್ಗೆ ಕೂಡಲೇ ರಾಜ್ಯ ಸರ್ಕಾರ ಮಧ್ಯಪ್ರವೇಶಿಸಬೇಕು. ಈ ಕೃತ್ಯಗಳ ಹಿಂದಿರುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು" ಎಂದು ಒತ್ತಾಯಿಸಿದ್ದಾರೆ.