ಬೆಂಗಳೂರು, ಜ. 17 (DaijiworldNews/MB) : ರಾಜ್ಯದ ಸರ್ಕಾರಿ ಶಾಲೆಗಳು ಕುಡಿಯುವ ನೀರು ಮತ್ತು ಶೌಚಾಲಯಗಳಂತಹ ಮೂಲಭೂತ ಸೌಲಭ್ಯಗಳ ಕೊರತೆಯನ್ನು ಎದುರಿಸುತ್ತಿವೆ.
ಲಭ್ಯವಿರುವ ಅಂಕಿಅಂಶಗಳ ಪ್ರಕಾರ, 16 ಶೈಕ್ಷಣಿಕ ಜಿಲ್ಲೆಗಳಲ್ಲಿ ಸುಮಾರು 6,000 ಶಾಲೆಗಳು ಕುಡಿಯುವ ನೀರಿನ ಕೊರತೆಯನ್ನು ಎದುರಿಸುತ್ತಿವೆ. 9,000 ಶಾಲೆಗಳಿಗೆ ಶೌಚಾಲಯವೇ ಇಲ್ಲ.
ಈ ಬಗ್ಗೆ ಮಾತನಾಡಿದ ಕರ್ನಾಟಕ ಸರ್ಕಾರದ ಸಲಹೆಗಾರ (ಶೈಕ್ಷಣಿಕ ಸುಧಾರಣೆಗಳು) ಪ್ರೊಫೆಸರ್ ಎಂ.ಆರ್.ದೊರೆಸ್ವಾಮಿ, ''ಸಾರ್ವಜನಿಕ ಶಿಕ್ಷಣ ಇಲಾಖೆಯು ಸಾರ್ವಜನಿಕ ಶಿಕ್ಷಣದ ಎಲ್ಲಾ ಉಪ ನಿರ್ದೇಶಕರಿಗೆ ಪತ್ರ ಬರೆದಿದ್ದು, ನೀರು ಮತ್ತು ಶೌಚಾಲಯಗಳ ಕೊರತೆಯನ್ನು ಎದುರಿಸುತ್ತಿರುವ ಶಾಲೆಗಳ ಪಟ್ಟಿಯನ್ನು ಕಳುಹಿಸುವಂತೆ ತಿಳಿಸಿದೆ. 16 ಜಿಲ್ಲೆಗಳಿಂದ ಪ್ರತಿಕ್ರಿಯೆ ಲಭಿಸಿದೆ. ಶಾಲೆಗಳಲ್ಲಿ ಮೂಲಭೂತ ಸೌಲಭ್ಯಗಳಿಲ್ಲದ ಕಾರಣ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ತೊಂದರೆ ಎದುರಿಸುತ್ತಿದ್ದಾರೆ'' ಎಂದು ಹೇಳಿದರು.
''ಶೌಚಾಲಯ ಸೌಲಭ್ಯವನ್ನು ಬಳಸಲು ಮಹಿಳಾ ಸಿಬ್ಬಂದಿ ಮತ್ತು ಬಾಲಕಿಯರು ಹತ್ತಿರದ ಮನೆಗಳಿಗೆ ತೆರಳಬೇಕಾಗಿದ್ದು ವಿದ್ಯಾರ್ಥಿಗಳು ಮನೆಯಿಂದಲೇ ತಮಗೆ ಬೇಕಾದ ಕುಡಿಯುವ ನೀರನ್ನು ತರಬೇಕಾಗಿದೆ'' ಎಂದು ತಿಳಿಸಿದರು.
''ಈ ಇಲಾಖೆಯು ಕೆಲವು ಕಾರ್ಯಕ್ರಮಗಳ ಅಡಿಯಲ್ಲಿ ಈ ಸೌಲಭ್ಯಗಳನ್ನು ಒದಗಿಸುತ್ತಿರುವುದರಿಂದ ಜಿಲ್ಲೆಗಳ ಉಪನಿರ್ದೇಶಕರಿಂದ ಪಡೆದ ಮಾಹಿತಿಯನ್ನು ಪಂಚಾಯತ್ ರಾಜ್ ಇಲಾಖೆಗೆ ಕಳುಹಿಸಲಾಗಿದೆ'' ಎಂದು ಕೂಡಾ ಹೇಳಿದರು.
''ಈ ಯೋಜನೆಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಉತ್ತಮ ಅನುದಾನವನ್ನು ನೀಡುತ್ತವೆ ಆದರೆ ಅವುಗಳನ್ನು ನ್ಯಾಯಯುತವಾಗಿ ಬಳಸಿಕೊಳ್ಳಬೇಕು'' ಹೇಳಿದ ಅವರು, "ಎಲ್ಲಾ ಶಾಲೆಗಳಿಂದ ಮಾಹಿತಿ ಪಡೆಯುವವರೆಗೂ ನಾವು ಕಾಯಬಹುದಿತ್ತು. ಆದರೆ ಮಾರ್ಚ್ನಿಂದ ಹೊಸ ಶೈಕ್ಷಣಿಕ ವರ್ಷ ಪ್ರಾರಂಭವಾಗುತ್ತದೆ. ಸಾಧ್ಯವಾದಷ್ಟು ಕೆಲಸಗಳನ್ನು ಆ ಹೊತ್ತಿಗೆ ಪೂರ್ಣಗೊಳಿಸಬೇಕೆಂದು ನಾವು ಬಯಸುತ್ತೇವೆ. ಆದ್ದರಿಂದ, 16 ಜಿಲ್ಲೆಗಳ ಮಾಹಿತಿಯನ್ನು ಅವರಿಗೆ ರವಾನಿಸಲಾಗಿದೆ'' ಎಂದು ಸ್ಪಷ್ಟಪಡಿಸಿದರು.
ಸಾರ್ವಜನಿಕ ಶಿಕ್ಷಣ ವಿಭಾಗದ ಪ್ರಧಾನ ಕಾರ್ಯದರ್ಶಿ ಎಸ್ ಆರ್ ಉಮಾಶಂಕರ್ ಮಾತನಾಡಿ, ''ಸೌಲಭ್ಯಗಳನ್ನು ಶಾಲೆಗಳಿಗೆ ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಅಗತ್ಯವಿರುವ ಶಾಲೆಗಳಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು'' ಎಂದು ತಿಳಿಸಿದರು.