ಬೆಂಗಳೂರು, ಜ. 17 (DaijiworldNews/MB) : ಶಿವಮೊಗ್ಗದ ಭದ್ರಾವತಿಯಲ್ಲಿ ಶನಿವಾರ ಆರ್ಎಎಫ್ ಘಟಕಕ್ಕೆ ಗೃಹಸಚಿವರಾದ ಅಮಿತ್ ಶಾ ಅವರು ಶಂಕುಸ್ಥಾಪನೆ ನೆರವೇರಿಸಿದ್ದು, ಅಡಿಗಲ್ಲು ಫಲಕ ಅನಾವರಣಗೊಳಿಸಿದ್ದಾರೆ. ಅಡಿಗಲ್ಲು ಫಲಕಗಳು ಹಿಂದಿ ಮತ್ತು ಆಂಗ್ಲಭಾಷೆಯಲ್ಲಿವೆ. ಈ ವಿಚಾರವಾಗಿ ಆಡಳಿತಾರೂಢ ಬಿಜೆಪಿಯ ವಿರುದ್ದ ವಾಗ್ದಾಳಿ ನಡೆಸಿರುವ ಕಾಂಗ್ರೆಸ್, ''ಬಿಜೆಪಿ ಆಳ್ವಿಕೆಯ ಕರ್ನಾಟಕದಲ್ಲಿ ಕನ್ನಡಿಗನೇ ಅನಾಥ'' ಎಂದು ಹೇಳಿದ್ದಾರೆ.
ಅಮಿತ್ ಶಾ ಅವರು ಅಡಿಗಲ್ಲು ಫಲಕ ಅನಾವರಣಗೊಳಿಸುವ ಫೋಟೋವನ್ನು ಉಲ್ಲೇಖ ಮಾಡಿ ಟ್ವೀಟ್ ಮಾಡಿರುವ ಕಾಂಗ್ರೆಸ್, "ಬಿಜೆಪಿ ಆಳ್ವಿಕೆಯ ಕರ್ನಾಟಕದಲ್ಲಿ ಕನ್ನಡಿಗನೇ ಅನಾಥ" ಎಂದು ಹೇಳಿದ್ದು, ''ನಾಡಧ್ವಜಕ್ಕೆ ಅವಮಾನ. ಕನ್ನಡ ವಿವಿಗೆ ಅನುದಾನ ಕಡಿತ. ಸಾಹಿತ್ಯ ಸಮ್ಮೇಳನಕ್ಕೆ ಅನುದಾನವಿಲ್ಲ. ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ನಿರಾಕರಣೆ. ಈಗ ಕಾರ್ಯಕ್ರಮದಲ್ಲಿ ಕನ್ನಡಕ್ಕೆ ಸಣ್ಣ ಸ್ಥಾನವಿಲ್ಲ'' ಎಂದು ಅಸಮಾಧಾನ ವ್ಯಕ್ತಪಡಿಸಿದೆ. ''ಕರ್ನಾಟಕ ಬಿಜೆಪಿ ನಾಡಿನ ಅಸ್ಮಿತೆ ಕೊಲ್ಲುವಂತೆ ನಾಗಪುರದ ಆದೇಶ ಪಾಲಿಸುತ್ತಿದ್ದೀರಾ?'' ಎಂದು ಕೂಡಾ ಪ್ರಶ್ನಿಸಿದ್ದಾರೆ.
ಇನ್ನು ಫಲಕದಲ್ಲಿ ಕನ್ನಡ ಭಾಷಾ ಲಿಪಿ ಇಲ್ಲದಿರುವುದನ್ನು ಜೆಡಿಎಸ್ ಮುಖಂಡ ಹೆಚ್ ಡಿ ಕುಮಾರಸ್ವಾಮಿ ಅವರೂ ಖಂಡಿಸಿದ್ದರು. ''ಇಲ್ಲಿ ಕನ್ನಡದ ಅವಗಣನೆ ನಿಚ್ಚಳವಾಗಿ ಕಾಣುತ್ತದೆ. ಅಮಿತ್ ಶಾ ಅವರು ತ್ರಿಭಾಷಾ ಸೂತ್ರ ಉಲ್ಲಂಘಿಸಿರುವುದಕ್ಕೆ ಕನ್ನಡಿಗರಿಗೆ ಸ್ಪಷ್ಟನೆ ನೀಡಬೇಕು'' ಎಂದು ಆಗ್ರಹಿಸಿದ್ದರು. ''ಗೃಹ ಸಚಿವರೆ ತ್ರಿಭಾಷಾ ಸೂತ್ರವನ್ನು ಧಿಕ್ಕರಿಸಿರುವುದು ಕನ್ನಡಕ್ಕೆ, ಕನ್ನಡಿಗರಿಗೆ ಮಾಡಿದ ಅಗೌರವ. ಈ ಸಂದರ್ಭದಲ್ಲಿ ರಾಜ್ಯದ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ನಾಡು-ನುಡಿಯ ಘನತೆಯನ್ನು ಮರೆತದ್ದು ಅತ್ಯಂತ ಖಂಡನೀಯ'' ಎಂದು ಹೇಳಿದ್ದರು.