ನವದೆಹಲಿ,ಜ.17 (DaijiworldNews/HR): ದೇಶಾದ್ಯಂತ ಕೊರೊನಾ ಲಸಿಕೆ ಅಭಿಯಾನಕ್ಕೆ ಜನವರಿ 16ರಂದು ಚಾಲನೆ ನೀಡಲಾಗಿದ್ದು, ನವದಹೆಲಿಯಲ್ಲಿ ಮೊದಲ ದಿನ ಕೊರೊನಾ ಲಸಿಕೆ ಚುಚ್ಚುಮದ್ದನ್ನು ಪಡೆದ ಆರೋಗ್ಯ ಕಾರ್ಯಕರ್ತರ ಪೈಕಿ ಒಂದು ತೀವ್ರ ಹಾಗೂ 51 ಕಡಿಮೆ ತೀವ್ರತೆಯ ಅಡ್ಡಪರಿಣಾಮ (ಎಇಎಫ್ಐ) ಉಂಟಾಗಿರುವ ಪ್ರಕರಣ ವರದಿಯಾಗಿದೆ.
ನವದೆಹಲಿಯ 11 ಜಿಲ್ಲೆಗಳಲ್ಲಿ ಮೊದಲ ದಿನದಲ್ಲಿ 8,117 ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ಹಂಚುವ ಗುರಿ ಹೊಂದಲಾಗಿದ್ದು, ಈ ಪೈಕಿ ಒಟ್ಟು 4,319 ಮಂದಿಗೆ ಲಸಿಕೆ ನೀಡಲಾಗಿದೆ ಎಂದು ವರದಿಯು ತಿಳಿಸಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಕೊರೊನಾ ಲಸಿಕೆ ಪಡೆದ ಬಳಿಕ ಆರೋಗ್ಯದಲ್ಲಿ ಏರು-ಪೇರಾದರೆ ಅದನ್ನು ರೋಗ ನಿರೋಧಕ ಪಡೆದ ಬಳಿಕ ಉಂಟಾಗಿರುವ ಅಡ್ಡ ಪರಿಣಾಮ (ಎಇಎಫ್ಐ) ಎಂದು ಪರಿಗಣಿಸಲಾಗುತ್ತದೆ.
ಇನ್ನು ಕೊಲ್ಕತದ ಡಾ.ಬಿ.ಸಿ.ರಾಯ್ ಆಸ್ಪತ್ರೆಯಲ್ಲಿ ಕೊರೊನಾ ಲಸಿಕೆ ಪಡೆದ 35 ವರ್ಷ ವಯಸ್ಸಿನ ನರ್ಸ್ ಒಬ್ಬರು ಲಸಿಕೆ ಪಡೆದ ಕೆಲ ನಿಮಿಷಗಳಲ್ಲೇ ಪ್ರಜ್ಞೆ ಕಳೆದುಕೊಂಡು, ನಡುಕ, ಸುಸ್ತು ಮತ್ತು ಇರಿಸುಮುರಿಸು ಉಂಟಾಯಿತು. ತಕ್ಷಣ ಅವರನ್ನು ಪಕ್ಕದ ನೀಲ್ ರತನ್ ಸರ್ಕಾರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಅಧಿಕೃತ ಮೂಲಗಳು ಹೇಳಿವೆ.