ಬೆಂಗಳೂರು, ಜ. 17 (DaijiworldNews/MB) : ''ಬಿಜೆಪಿಯಲ್ಲಿನ ಸಚಿವಾಕಾಂಕ್ಷಿಗಳು ಅಶಿಸ್ತು ತೋರುವುದನ್ನು ಮತ್ತು ಸಾರ್ವಜನಿಕವಾಗಿ ಟೀಕಿಸುವುದನ್ನು ನಿಲ್ಲಿಸಿ'' ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯದ ಪಕ್ಷದ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ.
ಎರಡು ದಿನಗಳ ರಾಜ್ಯ ಪ್ರವಾಸದಲ್ಲಿರುವ ಅಮಿತ್ ಶಾ ಅವರು ಶನಿವಾರ ಬೆಂಗಳೂರಿನಲ್ಲಿ ಬಿಜೆಪಿ ಕೋರ್ ಕಮಿಟಿ ಸಭೆ ನಡೆಸಿದರು.
ಸಭೆಯಲ್ಲಿ ಮಾತನಾಡಿದ ಅವರು, ''ಇಲ್ಲಿ ವ್ಯಕ್ತಿಗಿಂತ ಪಕ್ಷ ಮುಖ್ಯ. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ವಿರುದ್ಧ ಸಚಿವ ಹುದ್ದೆ ವಂಚಿತರು ಮಾಧ್ಯಮಗಳ ಮುಂದೆ ವೈಯಕ್ತಿಕ ಟೀಕೆ ಮಾಡುವುದನ್ನು ಕೂಡಲೇ ನಿಲ್ಲಿಸಬೇಕು. ಅಶಿಸ್ತು ತೋರುವುದರ ಬದಲು ಪಕ್ಷಕ್ಕಾಗಿ ಕೆಲಸ ಮಾಡಬೇಕು'' ಎಂದು ಯಾರ ಹೆಸರನ್ನು ಕೂಡಾ ಉಲ್ಲೇಖ ಮಾಡದೆ ಹೇಳಿದ್ದಾರೆ.
ಸಭೆಯಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್, ಕರ್ನಾಟಕದ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಕೇಂದ್ರ ಸಚಿವರುಗಳಾದ ಸದಾನಂದ ಗೌಡ, ಪ್ರಹ್ಲಾದ್ ಜೋಷಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ, ರಾಜ್ಯ ಬಿಜೆಪಿಯ ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್, ಸಚಿವರುಗಳಾದ ಆರ್ ಅಶೋಕ್, ಕೆ ಎಸ್ ಈಶ್ವರಪ್ಪ, ಅರವಿಂದ ಲಿಂಬಾವಳಿ ಭಾಗವಹಿಸಿದ್ದರು.