ಬೆಂಗಳೂರು, ಜ.17 (DaijiworldNews/HR): "ಕೃಷಿ ಅಥವಾ ಪಶುಸಂಗೋಪನೆಯ ಉದ್ದೇಶಕ್ಕೆ ಹಸು, ಕರು, ಎತ್ತು, ಎಮ್ಮೆ, ಕೋಣಗಳನ್ನು ಸಾಗಿಸುವಾಗಲೂ ಸಾಗಣೆಯ ಪರವಾನಗಿ ಕಡ್ಡಾಯ ಹೊಂದಿರಬೇಕು, ಅದರೊಂದಿಗೆ ಮಾಲೀಕತ್ವದ ದಾಖಲೆ ಮತ್ತು ಪಶುವೈದ್ಯಕೀಯ ಪ್ರಥಮ ಚಿಕಿತ್ಸಾ ಪೆಟ್ಟಿಗೆಯನ್ನೂ ಹೊಂದಿರಬೇಕು" ಎಂದು ಗೋಹತ್ಯೆ ನಿಷೇಧ ಕಾಯ್ದೆ-2020ಕ್ಕೆ ರಾಜ್ಯದ ಪಶುಸಂಗೋಪನಾ ಇಲಾಖೆ ರೂಪಿಸಿರುವ ಕರಡು ನಿಯಮಗಳಲ್ಲಿ ಉಲ್ಲೇಖಿಸಲಾಗಿದೆ.
ಸಾಂಧರ್ಭಿಕ ಚಿತ್ರ
"ಜಾನುವಾರುಗಳ ಮಾಲೀಕರು ಮಾಲೀಕತ್ವದ ದಾಖಲೆಗಳನ್ನು ಸಕ್ಷಮ ಪ್ರಾಧಿಕಾರಕ್ಕೆ ಸಲ್ಲಿಸಿ ಸಾಗಣೆ ಪರವಾನಗಿ ಪಡೆಯುವುದು ಕಡ್ಡಾಯವಾಗಿದ್ದು, ಪರವಾನಗಿಯ ಹೊರತಾಗಿ ಗೋಸಾಗಣೆಗೆ ವಾಹನಗಳ ಮಾಲೀಕರು ಸಮ್ಮತಿ ಸೂಚಿಸುವಂತಿಲ್ಲ. ನಿಯಮಗಳ ಉಲ್ಲಂಘನೆಯಾದಲ್ಲಿ ಗೋವುಗಳ ಮಾಲೀಕರು ಅಥವಾ ಅವರ ಪ್ರತಿನಿಧಿ, ವಾಹನ ಮಾಲೀಕರು, ಜತೆಗಿರುವ ಸಿಬ್ಬಂದಿ ಕೂಡ ಹೊಣೆಗಾರರಾಗುತ್ತಾರೆ" ಎಂದು ಕರಡು ನಿಯಮಗಳಲ್ಲಿ ತಿಳಿಸಲಾಗಿದೆ.
ಇನ್ನು "ವಾಹನದಲ್ಲಿರುವ ಗೋವುಗಳ ಸಂಖ್ಯೆ, ಕಳುಹಿಸಿದವರು ಮತ್ತು ಪಡೆಯುವವರ ಹೆಸರು, ವಿಳಾಸ, ದೂರವಾಣಿ ಸಂಖ್ಯೆಯನ್ನು ದೊಡ್ಡ ಅಕ್ಷರಗಳಲ್ಲಿ ವಾಹನದ ಮೇಲೆ ಬರೆಯುವುದು ಕಡ್ಡಾಯವಾಗಿದೆ".
"ಗೋವುಗಳ ಸಾಗಣೆಯ ಸಮಯದಲ್ಲಿ ಅವುಗಳು ಮೃತಪಟ್ಟರೆ ಮರಣೋತ್ತರ ಪರೀಕ್ಷೆ ನಡೆಸಿ, ವರದಿ ಪಡೆದ ಬಳಿಕವೇ ಮೃತದೇಹವನ್ನು ಸಾಗಿಸಬಹುದು" ಎಂದು ಕರಡು ನಿಯಮಗಳಲ್ಲಿ ಉಲ್ಲೇಖಿಸಲಾಗಿದೆ.