ನವದೆಹಲಿ, ಜ.17 (DaijiworldNews/HR): ದೇಶಾದ್ಯಂತ ಜನವರಿ 16ದಂದು ಕೊರೊನಾ ಲಸಿಕೆ ಹಂಚಿಕೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದು, ವಿಜ್ಞಾನಿಗಳ ಸಾಧನೆಯನ್ನು ಇಡೀ ದೇಶವೇ ಕೊಂಡಾಡುತ್ತಿದ್ದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಭಿನಂದನೆ ಸಲ್ಲಿಸದಿರುವುದು ಬಿಜೆಪಿ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ ಎನ್ನಲಾಗಿದೆ.
ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ ಐಟಿ ಸೆಲ್ ಉಸ್ತುವಾರಿ ವಹಿಸಿರುವ ಅಮಿತ್ ಮಾಳವಿಯಾ, "ಕೊರೊನಾ ಲಸಿಕೆ ಹೊರತರುವ ಸರ್ಕಾರದ ಎಲ್ಲ ಪ್ರಯತ್ನಗಳ ಬಗ್ಗೆ ರಾಹುಲ್ ಗಾಂಧಿ ಅನುಮಾನ ವ್ಯಕ್ತಪಡಿಸಿದ್ದರು, ಆದರೆ ವಿಶ್ವದ ಅತಿ ದೊಡ್ಡ ಲಸಿಕೆ ಹಂಚಿಕೆ ಅಭಿಯಾನಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಿದಾಗ ಅದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಲು ರಾಹುಲ್ ಒಂದು ಟ್ವೀಟ್ ಕೂಡ ಮಾಡಲಿಲ್ಲ. ಅಷ್ಟೆ ಅಲ್ಲದೆ ಭಾರತೀಯ ವಿಜ್ಞಾನಿಗಳನ್ನು ಕೂಡ ಅಭಿನಂದಿಸಿಲ್ಲ" ಎಂದು ಆರೋಪಿಸಿದ್ದಾರೆ.
ಇನ್ನು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಕೂಡ ರಾಹುಲ್ ಗಾಂಧಿ ವಿರುದ್ಧ ಹರಿಹಾಯ್ದಿದ್ದು, "ಕೊರೊನಾ ಲಸಿಕೆ ಉತ್ಪಾದಿಸುವ ಭಾರತದ ಸಾಮರ್ಥ್ಯದ ಬಗ್ಗೆ ಅನುಮಾನ ಪಟ್ಟವರೆಲ್ಲ ಈಗ ಮುಜುಗರಕ್ಕೊಳಗಾಗಿ ಸ್ವಯಂ ಅನುಮಾನದ ವಿರುದ್ಧ ಲಸಿಕೆ ಹಾಕಿಸಿಕೊಳ್ಳಬಹುದು" ಎಂದು ಹೇಳಿದ್ದಾರೆ.