ಬೆಂಗಳೂರು, ಜ. 17 (DaijiworldNews/MB) : ''ನನಗೆ ವೈದ್ಯರು ಲಸಿಕೆ ಹಾಕಿಸಿಕೊಳ್ಳಲು ಹೇಳಿದಾಗ ಖಂಡಿತಾ ಹಾಕಿಸಿಕೊಳ್ಳುತ್ತೇನೆ'' ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಹೇಳಿದ್ದು, ''ಯಾವುದೇ ಸಂಶಯ, ಆತಂಕವಿಲ್ಲದೆ ಕೊರೊನಾ ಲಸಿಕೆ ಹಾಕಿಸಿಕೊಳ್ಳಿ'' ಎಂದು ಆರೋಗ್ಯ ಕಾರ್ಯಕರ್ತರು, ನೌಕರರಲ್ಲಿ ಮನವಿ ಮಾಡಿದರು.
ಶನಿವಾರ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ''ಹಿರಿಯ ವೈದ್ಯರಾದ ಡಾ ಸುದರ್ಶನ್ ಬಲ್ಲಾಳ್ ಸೇರಿದಂತೆ ಹಲವು ಹಿರಿಯ ವೈದ್ಯರುಗಳು ಲಸಿಕೆ ಹಾಕಿಸಿಕೊಂಡಿದ್ದಾರೆ. ಹಾಗಿರುವಾಗ ಲಸಿಕೆಯ ಸುರಕ್ಷತೆಯ ವಿಚಾರದಲ್ಲಿ ಯಾವುದೇ ಅನುಮಾನ ಬೇಡ'' ಎಂದು ಹೇಳಿದರು.
''ಮೊದಲ ಹಂತದಲ್ಲಿ ಕರ್ನಾಟಕದಲ್ಲಿ 243 ಕೇಂದ್ರಗಳನ್ನು ಕೊರೊನಾ ಲಸಿಕೆ ನೀಡಲು ಗುರುತಿಸಲಾಗಿದ್ದು ಪ್ರತಿ ಕೇಂದ್ರದಲ್ಲಿ ದಿನಕ್ಕೆ 100 ಜನರಿಗೆ ಲಸಿಕೆ ನೀಡಲಾಗುತ್ತದೆ. ಹಂತಹಂತವಾಗಿ ಇದರ ಸಂಖ್ಯೆ ಹೆಚ್ಚಿಸಲಾಗುವುದು'' ಎಂದು ಮಾಹಿತಿ ನೀಡಿದ ಅವರು, ''ಕರ್ನಾಟಕದಲ್ಲಿ ಸಾಕಷ್ಟು ಲಸಿಕಾ ಸಂಗ್ರಹ ಕೇಂದ್ರಗಳಿವೆ'' ಎಂದರು.
''ಮೊದಲ ದಿನ 43, 015 ಕೊರೊನಾ ಕಾರ್ಯಕರ್ತರಿಗೆ ದಾಖಲಿಸಲಾಗಿತ್ತು. ಇಷ್ಟು ಬಹು ದೊಡ್ಡ ಪ್ರಮಾಣದಲ್ಲಿ ಮೊದಲ ದಿನವೇ ಲಸಿಕೆ ಹಾಕಿಸಿದ ಕೆಲವು ರಾಜ್ಯಗಳಲ್ಲಿ ಕರ್ನಾಟಕವೂ ಒಂದು'' ಎಂದು ಹರ್ಷ ವ್ಯಕ್ತಪಡಿಸಿದರು.