ಬೆಂಗಳೂರು, ಜ. 17 (DaijiworldNews/MB) : ''ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯ ಸರ್ಕಾರ ಅವಧಿ ಪೂರ್ಣಗೊಳಿಸಿ ಮತ್ತೆ 5 ವರ್ಷಕ್ಕೆ ಅಧಿಕಾರ ಪಡೆಯಲಿದೆ'' ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದರು.
ಶನಿವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆದ ಸಮಾರಂಭದಲ್ಲಿ ಬೆಂಗಳೂರಿನ ಪೊಲೀಸ್ ಗೃಹ–2025 ಯೋಜನೆ ಮತ್ತು ಬಹುಮಹಡಿ ಪೊಲೀಸ್ ವಸತಿಗೃಹಗಳು ಮತ್ತು ವಿಜಯಪುರದಲ್ಲಿ ಭಾರತೀಯ ಮೀಸಲು ಪಡೆಯ (ಐಆರ್ಬಿ) ನೂತನ ಆಡಳಿತ ಕಚೇರಿಯ ಕಟ್ಟಡವನ್ನು ವರ್ಚುವಲ್ ಮೂಲಕ ಉದ್ಘಾಟಿಸಿದರು.
ಮೂರು ತಾಸು ವಿಳಂಬವಾಗಿ ಆರಂಭವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ''ಯಡಿಯೂರಪ್ಪ ಸರ್ಕಾರವು ಅಭಿವೃದ್ಧಿಪರ, ಜನಪರ ಕೆಲಸಗಳನ್ನು ಮಾಡುತ್ತಿದ್ದು ಸರ್ಕಾರ ಪತನವಾಗಲಿದೆ ಎಂಬ ಕಾಂಗ್ರೆಸ್ ಕನಸು ನನಸಾಗದು'' ಎಂದರು.
''ಪ್ರಧಾನಿ ಮೋದಿಯವರ ಹಲವು ಯೋಜನೆಗಳು ರಾಜ್ಯಕ್ಕಿದ್ದು, ರಾಜ್ಯ ಸರ್ಕಾರಕ್ಕೆ ಮೂಲಸೌಲಭ್ಯ, ಕೃಷಿ ಸೇರಿದಂತೆ ಎಲ್ಲ ವಲಯಗಳಲ್ಲಿ ನೆರವು ನೀಡಲು ಕೇಂದ್ರ ಸರ್ಕಾರ ಬದ್ಧ'' ಎಂದು ಭರವಸೆ ನೀಡಿದರು.
''ಕೊರೊನಾ ವಿರುದ್ಧದ ಹೋರಾಟದಲ್ಲಿ ಪ್ರಧಾನಿ ಮೋದಿ ನೇತೃತ್ವದಲ್ಲಿ ದೇಶ ಯಶಸ್ವಿಯಾಗಿದೆ. ಆದರೆ ಕೆಲವರು ಇದಕ್ಕೂ ಟೀಕಿಸುತ್ತಾರೆ'' ಎಂದರು.