ಬಂಟ್ವಾಳ, ಜ 16 (DaijiworldNews/SM): ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಲಕ್ಷಾಂತರ ರೂ. ಮೌಲ್ಯದ ಗೋವಾ ಮದ್ಯವನ್ನು ಹಾಗೂ ಆರೋಪಿಯನ್ನು ಅಬಕಾರಿ ಇಲಾಖೆಯ ಅಧಿಕಾರಿಗಳು ವಶಕ್ಕೆ ಪಡೆದುಕೊಂಡ ಘಟನೆ ಜ.16 ರಂದು ಶನಿವಾರ ನಡೆದಿದೆ. ಮೊಡಂಕಾಪು ನಿವಾಸಿ ಸಂದೀಪ್ ಲೋಬೊ(35) ಬಂಧಿತ ಆರೋಪಿ. ಬಂಧಿತನ ಕೈಯಿಂದ 22 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಘಟನೆಯ ವಿವರ
ಬಂಟ್ವಾಳ ತಾಲೂಕು ಬಿ. ಮೂಡ ಗ್ರಾಮದ ಮೊಡಂಕಾಪುವಿನಲ್ಲಿ ಅಬಕಾರಿ ಇಲಾಖೆಯ ಅಧಿಕಾರಿಗಳು ಖಚಿತ ಮಾಹಿತಿ ಮೇರೆಗೆ ರಸ್ತೆ ಗಾವಲು ನಡೆಸುತ್ತಿದ್ದಾಗ ಟೊಯೋಟಾ ಇಟೋಸ್ ಕಾರಿನಲ್ಲಿ ಅಕ್ರಮವಾಗಿ 50,400 ಲೀ ಗೋವಾ ಮದ್ಯವನ್ನು ಸಾಗಾಣಿಕೆ ಮಾಡುತ್ತಿದ್ದು, ತಡೆದು ನಿಲ್ಲಿಸಿ ವಿಚಾರಿಸಿದಾಗ ಅಂಗಡಿಯಲ್ಲಿ ದಾಸ್ತಾನು ಮಾಡಿರುವ ಮಾಹಿತಿಯನ್ನು ಆರೋಪಿ ನೀಡಿದ್ದಾನೆ.
ಮಾಹಿತಿಯಂತೆ ಆರೋಪಿಗಳಿಗೆ ಸೇರಿದ ವೆಲ್ಡಿಂಗ್ ಶಾಪಿನ ಮೇಲೆ ದಾಳಿ ಮಾಡಿದಾಗ 107,600 ಲೀ ಮದ್ಯ ಹಾಗೂ 34ಲೀ ಬಿಯರ್ ಗೋವಾ ಅಕ್ರಮವಾಗಿ ದಾಸ್ತಾನು ಮಾಡಿರುವುದು ಕಂಡು ಬಂದಿದ್ದು ಆರೋಪಿಯಾಗಿರುವ ಸಂದೀಪ್ ಲೋಬೋ ಎಂಬಾತನನ್ನು ದಸ್ತಗಿರಿ ಮಾಡಿ ಪ್ರಕಾರಣವನ್ನು ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಅಕ್ರಮವಾಗಿ ಸಾಗಾಟ ಮಾಡುವ ಕೃತ್ಯಕ್ಕೆ ಬಳಸಿದ 2 ಟೊಯೋಟಾ ಇಟೋಸ್ ವಾಹನಗಳನ್ನು, ಅಶೋಕ ಲೈಲ್ಯಾನ್ಡ್ ಟೆಂಪೋ ಹಾಗೂ ಮದ್ಯವನ್ನು ವಶಪಡಿಸಲಾಗಿದೆ.
ದ. ಕ. ಜಿಲ್ಲೆಯ ಅಬಕಾರಿ ಉಪ ಆಯುಕ್ತರಾದ ಶೈಲಜಾ ಕೋಟೆ ಇವರ ನೇತೃತ್ವದಲ್ಲಿ ಬಂಟ್ವಾಳ ವಲಯದ ಅಬಕಾರಿ ಇಲಾಖೆ ಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ.