ಮಂಗಳೂರು, ಜ.16 (DaijiworldNews/PY): "ಕೊರೊನಾ ಸೋಂಕಿನ ಎರಡನೇ ಅಲೆ ಉಂಟಾಗದಂತೆ ತಡೆಯಲು ಜಿಲ್ಲೆಯಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು" ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು ಇಂದು ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಮಾತನಾಡಿದರು.
"ವಿದೇಶಗಳಲ್ಲಿ ಈಗಾಗಲೇ ಕೊರೊನಾದ ಎರಡನೇ ಅಲೆ ಬಾಧಿಸಿ ಹೆಚ್ಚು ಜನರು ಸೋಂಕಿತರಾಗಿದ್ದಾರೆ. ಈ ವರೆಗೆ ನಮ್ಮ ದೇಶದಲ್ಲಿ ಎರಡನೇ ಅಲೆ ಕಂಡುಬಂದಿರುವುದಿಲ್ಲ್ಲ. ಆದರೂ ಸಹ ನಿರ್ಲಕ್ಷ್ಯ ವಹಿಸದೇ ಕೊರೊನಾ ಎರಡನೇ ಅಲೆಯನ್ನು ತಡೆಯಲು ಸನ್ನದ್ದರಾಗಬೇಕು" ಎಂದರು.
"ವಿದೇಶದಿಂದ ಬಂದಿರುವವರು, ವೃತ್ತಿ ಹಾಗೂ ವಿದ್ಯಾಭ್ಯಾಸಕ್ಕಾಗಿ ನಮ್ಮ ಜಿಲ್ಲೆಗೆ ಹೊರರಾಜ್ಯದಿಂದ ಹಾಗೂ ಹೊರ ಜಿಲ್ಲೆಯಿಂದ ಬರುವವರಿಗೆ ತಪ್ಪದೇ ಕೊರೊನಾ ಪರೀಕ್ಷೆ ಮಾಡಿಸಬೇಕು. ಶಾಲಾ ಕಾಲೇಜುಗಳಲ್ಲಿ ಕೊರೊನಾ ನಿಯಂತ್ರಣ ಮಾರ್ಗಸೂಚಿಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಸೇರಿದಂತೆ ಮತ್ತಿತರ ನಿಯಮಗಳನ್ನು ಚಾಚು ತಪ್ಪದೇ ಪಾಲಿಸುವಂತೆ ಶಿಕ್ಷಣ ಸಂಸ್ಥೆಗಳು ನೋಡಿಕೊಳ್ಳಬೇಕು" ಎಂದರು.
"ವಿವಾಹ ಸಮಾರಂಭಗಳಲ್ಲಿ ನಿಗದಿ ಪಡಿಸಿರುವುದಕ್ಕಿಂತ ಹೆಚ್ಚಿನ ಜನರು ಸೇರದಂತೆ ನೋಡಿಕೊಳ್ಳಬೇಕು. ಜೊತೆಗೆ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವಂತೆ ಪೊಲೀಸ್ ಅಧಿಕಾರಿಗಳು ಗಮನಹರಿಸಬೇಕು. ಸರ್ಕಾರಿ ಮತ್ತು ಖಾಸಗಿ ಬಸ್ಸ್ಗಳಲ್ಲಿ ಮಾಸ್ಕ್ ಧರಿಸದೇ ಇರುವಂತಹ ಪ್ರಕರಣಗಳು ಕಂಡುಬರುತ್ತಿದ್ದು, ಅಂತವರ ಬಗ್ಗೆ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು" ಎಂದರು.
"ಕಳೆದ ವರ್ಷ ಅಧಿಕ ಮಳೆಯಿಂದಾಗಿ ಜಿಲ್ಲೆಯ ಹಲವು ಪ್ರದೇಶದಲ್ಲಿ ಗುಡ್ಡ ಕುಸಿತದಿಂದ ಜನರು ತೀವ್ರವಾಗಿ ತೊಂದರೆಗೆ ಸಿಲುಕಿದ್ದರು, ಈ ಸಾಲಿನಲ್ಲಿ ಅಂತಹ ಯಾವುದೇ ತೊಂದರೆ ಉಂಟಾಗದಂತೆ ಅಧಿಕಾರಿಗಳು ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಬೇಕು" ಎಂದರು.
"ಪ್ರಕೃತಿ ವಿಕೋಪದಿಂದ ತೊಂದರೆಗೊಳಗಾದ ಕಾರ್ಯಾಚರಣೆಗೆ ಅಗತ್ಯವಿದ್ದಲ್ಲಿ ನೌಕ ಪಡೆಯಿಂದ ಸಂಪೂರ್ಣ ಸಹಕಾರ ಸಿಗಲಿದೆ, ಮಳೆಗಾಲದಲ್ಲಿ ಅಪಾಯ ಸಂಭವಿಸುವ ಸ್ಥಳಗಳಲ್ಲಿ ತಕ್ಷಣ ನೆರವಿಗಾಗಿ ಜಿಲ್ಲಾಡಳಿತದಿಂದ ಅಗತ್ಯವಿರುವ ಬೋಟ್, ಲೈಫ್ ಜಾಕೆಟ್, ಟಾರ್ಚ್, ರೋಪ್ ಸೇರಿದಂತೆ ವಿವಿಧ ಉಪಕರಣಗಳನ್ನು ಪೂರೈಸುತ್ತದೆ" ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಕೆಲವು ರಿಫೈನರಿ ತಯಾರಿಕಾ ಕಂಪೆನಿಯಲ್ಲಿ ಅನಿಲ ಸೋರಿಕೆಯಿಂದ ಅಗ್ನಿ ಅವಘಡಗಳು ಸಂಭವಿಸುವ ಪ್ರಕರಣಗಳು ಕಂಡು ಬಂದಿವೆ. ಮುಂದಿನ ದಿನಗಳಲ್ಲಿ ಜೀವಕ್ಕೆ ಹಾನಿ ಸಂಭವಿಸುವ ಸಾಧ್ಯತೆಗಳಿರುತ್ತವೆ. ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಆಗಿಂದಾಗ್ಗೆ ಅಣಕು ಪ್ರದರ್ಶನಗಳನ್ನು ಮಾಡಬೇಕು. ಈ ಅಣಕು ಪ್ರದರ್ಶನವು ತುರ್ತು ಪರಿಸ್ಥಿತಿಯಲ್ಲಿ ಅಪಾಯಗಳು, ಸುರಕ್ಷಿತ ಸ್ಥಳಾಂತರಿಸುವಿಕೆ ಮತ್ತು ರಕ್ಷಣೆಗೆ ಬಹಳ ಉಪಕಾರಿಯಾಗುತ್ತದೆ ಎಂದು ತಿಳಿಸಿದರು.
"ಜಿಲ್ಲೆಯ ಆಸ್ಪತ್ರೆಗಳಲ್ಲಿ ಕೊರೊನಾ ಸಂಬಂಧಿತ ಮುನ್ನೆಚ್ಚರಿಕಾ ಸೂಕ್ತ ಕ್ರಮಗಳನ್ನು ಜಾರಿಗೊಳಿಸಬೇಕು. ಅಲ್ಲಲ್ಲಿ ಕೊರೊನಾ ಸಂಬಂಧಿತ ಸೂಚನಾ ಫಲಕಗಳನ್ನು ಹಾಕಬೇಕು. ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕಗಳಲ್ಲಿ ಕೆಲವೊಮ್ಮೆ ಬೆಂಕಿ ಅವಘಡಗಳು ಸಂಭವಿಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಅಗತ್ಯ ಮುಂಜಾಗ್ರತೆ ವಹಿಸಬೇಕು. ಹಾಗೂ ಅಗ್ನಿ ನಿರೋಧಕ ಉಪಕರಣಗಳನ್ನು ದಾಸ್ತಾನು ಇಟ್ಟುಕೊಳ್ಳಬೇಕು" ಎಂದರು.
"ಜಿಲ್ಲೆಯಲ್ಲಿ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಈವರೆಗೂ ಕಂಡುಬರುವುದಿಲ್ಲ. ಆದರೂ ಸಹ ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಉಂಟಾಗದಂತೆ ಎಚ್ಚರ ವಹಿಸಬೇಕು" ಎಂದು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಎಂ.ಜೆ ರೂಪಾ, ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮೀ ಪ್ರಸಾದ್ ಸೇರಿದಂತೆ ಮತ್ತಿತರ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.