ಅಮೃತಸರ್,ಜ.16 (DaijiworldNews/HR): ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಮಸೂದೆಯನ್ನು ವಿರೋಧಿಸಿ ಪ್ರತಿಭಟಿಸುತ್ತಿರುವ ರೈತ ಸಂಘಟನೆಗಳ ಪೈಕಿ ಒಂದಾಗಿರುವ ಲೋಕ್ ಭಲಾಯಿ ಇನ್ಸಾಫ್ ವೆಲ್ಫೇರ್ ಸೊಸೈಟಿಯ ಅಧ್ಯಕ್ಷ ಬಲದೇವ್ ಸಿಂಗ್ ಸಿರ್ಸಾ ಅವರಿಗೆ ರಾಷ್ಟ್ರೀಯ ತನಿಖಾ ಏಜನ್ಸಿ ಸಮನ್ಸ್ ಜಾರಿಗೊಳಿಸಿದೆ ಎಂದು ತಿಳಿದು ಬಂದಿದೆ.
ಸಿರ್ಸಾ ಅವರಿಗೆ ಜನವರಿ 17ರಂದು ಎನ್ಐಎಯ ಹೊಸದಿಲ್ಲಿ ಕಚೇರಿಯಲ್ಲಿ ಹಾಜರಾಗುವಂತೆ ಸೂಚಿಸಲಾಗಿದ್ದು, "ಸರಕಾರದ ವಿರುದ್ಧ ಬಂಡಾಯವೆಬ್ಬಿಸಲು ಜನರನ್ನು ಪ್ರಚೋದಿಸುತ್ತಿದ್ದಾರೆ ಹಾಗೂ ಭಯ ಮತ್ತು ಅರಾಜಕತೆಯ ವಾತಾವರಣ ಸೃಷ್ಟಿಸಲು ಸಂಚು ಹೂಡಿದ್ದಾರೆ" ಎಂಬ ಆರೋಪ ಅವರ ಮೇಲಿದೆ.
ಇನ್ನು ಕೇಂದ್ರ ಸರಕಾರವು ರೈತರ ಪ್ರತಿಭಟನೆಯ ದಾರಿ ತಪ್ಪಿಸಲು ಈ ರೀತಿ ಮಾಡುತ್ತಿದೆ ಎಂದು ಬಲದೇವ್ ಸಿಂಗ್ ಸಿರ್ಸಾ ಆರೋಪಿಸಿದ್ದು,"ಸರಕಾರ ಮೊದಲು ಸುಪ್ರೀಂ ಕೋರ್ಟ್ ಮುಖಾಂತರ ರೈತರ ಪ್ರತಿಭಟನೆಯನ್ನು ದಾರಿ ತಪ್ಪಿಸಲು ಯತ್ನಿಸಿದ್ದು, ಈಗ ಎನ್ಐಎಯನ್ನು ಬಳಸುತ್ತಿದೆ" ಎಂದು ಅವರು ಆರೋಪಿಸಿದ್ದಾರೆ.