ನವದೆಹಲಿ, ಜ.16 (DaijiworldNews/PY): "ಜಗತ್ತಿನ ಅತೀ ದೊಡ್ಡ ಲಸಿಕೆ ನೀಡುವ ಅಭಿಯಾನದಿಂದ ವಿಶ್ವದಲ್ಲಿ ಸ್ವಾವಲಂಬಿ ನವ ಭಾರತದ ಉದಯವಾಗಿದೆ" ಎಂದು ಗೃಹ ಸಚಿವ ಅಮಿತ್ ಶಾ ಹೇಳಿದರು.
ಈ ವಿಚಾರದ ಬಗ್ಗೆ ಟ್ವೀಟ್ ಮಾಡಿರುವ ಅವರು, "ಕೊರೊನಾ ಲಸಿಕೆ ಹಂಚಿಕೆಯು ಒಂದು ಐತಿಹಾಸಿಕ ಕ್ಷಣವಾಗಿದೆ. ದೇಶವು ಇಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತ ಇಂದು ಕೊರೊನಾ ವಿರುದ್ದದ ಹೋರಾಟದಲ್ಲಿ ಪ್ರಮುಖ ಹಂತವನ್ನು ದಾಟಿದೆ" ಎಂದರು.
"ವಿಶ್ವದ ಅತಿದೊಡ್ಡ ವ್ಯಾಕ್ಸಿನೇಷನ್ ಅಭಿಯಾನವು ಭಾರತದ ವಿಜ್ಞಾನಿಗಳ ಅಪಾರ ಸಾಮರ್ಥ್ಯ ಹಾಗೂ ನಾಯಕತ್ವದ ಶಕ್ತಿಯನ್ನು ಪ್ರದರ್ಶಿಸುತ್ತದೆ" ಎಂದು ತಿಳಿಸಿದರು.
"ಮಾನವೀಯತೆಯ ವಿರುದ್ದದ ದೊಡ್ಡ ಬಿಕ್ಕಟ್ಟನ್ನು ಕೊನೆಗೊಳಿಸಲು ಗೆದ್ದ ಕೆಲವೇ ದೇಶಗಳಲ್ಲಿ ಭಾರತವೂ ಕೂಡಾ ಒಂದು. ಈ ಅಭೂತಪೂರ್ವ ಸಾಧನೆಯ ಬಗ್ಗೆ ಪ್ರತಿಯೊಬ್ಬ ಭಾರತೀಯನೂ ಹೆಮ್ಮೆ ಪಡುತ್ತಾನೆ. ಇಂದು ಜಗತ್ತಿನ ಸ್ವಾವಲಂಬಿ ನವ ಭಾರತದ ಉದಯವಾಗಿದೆ. ಎಲ್ಲಾ ವಿಜ್ಞಾನಿಗಳಿಗೆ ನನ್ನ ಅಭಿನಂದನೆಗಳು" ಎಂದು ಹೇಳಿದರು.
"ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಈ ನವ ಭಾರತ, ವಿಪತ್ತುಗಳನ್ನು ಅವಕಾಶಗಳಾಗಿ ಮತ್ತು ಸವಾಲುಗಳನ್ನು ಸಾಧನೆಗಳಾಗಿ ಪರಿವರ್ತಿಸುವ ಭಾರತ. ಈ ಮೇಡ್ ಇನ್ ಇಂಡಿಯಾ ಲಸಿಕೆ ಸ್ವಾವಲಂಬಿ ಭಾರತದ ನಿರ್ಣಯವನ್ನು ಪ್ರತಿನಿಧಿಸುತ್ತದೆ. ಈ ಐತಿಹಾಸಿಕ ದಿನದಂದು ನಮ್ಮ ಎಲ್ಲಾ ಕೊರೊನಾ ವಾರಿಯರ್ಸ್ಗಳಿಗೆ ನನ್ನ ಕೋಟಿ ಕೋಟಿ ನಮನಗಳು" ಎಂದು ತಿಳಿಸಿದ್ದಾರೆ.