ನವದೆಹಲಿ, ಜ.16 (DaijiworldNews/PY): "ಕೊರೊನಾ ವಿರುದ್ದ ಹೋರಾಟದಲ್ಲಿ ದೇಶದ ಲಸಿಕೆಯು ಸಂಜೀವಿನಿಯಾಗಿ ಕಾರ್ಯ ನಿರ್ವಹಿಸಲಿದೆ" ಎಂದು ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಹೇಳಿದರು.
ನವದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ನಡೆದ ಲಸಿಕೆ ಅಭಿಯಾನವನ್ನು ಉದ್ಘಾಟಿಸಿ ಬಳಿಕ ಮಾತನಾಡಿದ ಅವರು, "ಇಂದು ನನಗೆ ಅತ್ಯಂತ ಸಂತೋಷವಾದ ದಿನವಾಗಿದೆ. ಕಳೆದ ಒಂದು ವರ್ಷದಿಂದ ನಾವು ಕೊರೊನಾ ವಿರುದ್ದ ಹೋರಾಡುತ್ತಿದ್ದೇವೆ. ವಿಜ್ಞಾನಿಗಳು ಹಾಗೂ ವೈದ್ಯರ ಸಹಾಯದಿಂದ ದೇಶ ತನ್ನದೇ ಆದ ಲಸಿಕೆಯನ್ನು ಪಡೆದುಕೊಂಡಿದೆ. ಈ ಲಸಿಕೆಯು ಸಂಜೀವಿನಿಯಾಗಿ ಕೆಲಸ ಮಾಡಲಿದೆ" ಎಂದರು.
ಜಗತ್ತಿನ ಅತೀ ದೊಡ್ಡ ಲಸಿಕೆ ನೀಡುವ ಅಭಿಯಾನಕ್ಕೆ ಆನ್ಲೈನ್ ಮೂಲಕ ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದರು. ಚಾಲನೆ ನೀಡಿದ ಮೊದಲ ದಿನದಂದೇ ದೇಶದ 3,006 ಲಸಿಕಾ ಕೇಂದ್ರಗಳಲ್ಲಿ ಸುಮಾರು ಮೂರು ಲಕ್ಷ ಆರೋಗ್ಯ ಕಾರ್ಯಕರ್ತರಿಗೆ ಕೊರೊನಾ ಲಸಿಕೆಯ ಮೊದಲ ಡೋಸ್ ನೀಡಲಾಗುತ್ತಿದೆ.
ದೇಶದಲ್ಲಿ ತಯಾರಾದ ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಹಾಗೂ ಅಸ್ಪ್ರಾಜೆನೆಕಾ ಅಭಿವೃದ್ದಿಪಡಿಸಿರುವ ಕೋವಿಶೀಲ್ಡ್ ಲಸಿಕೆ ಹಾಗೂ ಭಾರತದ ಬಯೋಟೆಕ್ ದೇಶದ ಉನ್ನತ ಕ್ಲಿನಿಕಲ್ ಸಂಶೋಧನಾ ಸಂಸ್ಥೆಯೆ ಜೊತೆ ಸೇರಿ ತಯಾರಿಸಿದ ಕೋವ್ಯಾಕ್ಸಿನ್ ಅನ್ನು ಕೊರೊನಾ ಲಸಿಕಾ ಅಭಿಯಾನದಲ್ಲಿ ಉಪಯೋಗ ಮಾಡಲಾಗುತ್ತಿದೆ.