ಮಂಗಳೂರು, ಜ.16 (DaijiworldNews/PY): ದ್ವಿಚಕ್ರ ವಾಹನದಲ್ಲಿ ಬಂದ ಮೂವರು ಜನವರಿ 14 ರಂದು ಪದವಿನಂಗಡಿ ಬಳಿಯ ಕೊಂಚಾಡಿಯಲ್ಲಿರುವ ದೇವಸ್ಥಾನ ಸಮೀಪ ಬಾಲಕನನ್ನು ಅಪಹರಿಸಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನು ಕಾವೂರಿನ ರಕ್ಷಕ್ ಶೆಟ್ಟಿ (22), ಬೋಂದೆಲ್ನ ಅಲಿಸ್ಟರ್ ತಾವ್ರೋ (21) ಹಾಗೂ ಕಾವೂರಿನ ಕೆ.ಐ.ಓ.ಸಿ.ಎಲ್ ಕ್ವಾಟರ್ಸ್ನ ರಾಹುಲ್ ಸಿನ್ಹ (21) ಎಂದು ಗುರುತಿಸಲಾಗಿದೆ.
ಆರೋಪಿಗಳ ವಿರುದ್ದ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ. ರಕ್ಷಕ್ ಶೆಟ್ಟಿ ವಿರುದ್ದ ಮಂಗಳೂರು ಪೂರ್ವ ಠಾಣೆಯಲ್ಲಿ ಹಲವು ಪ್ರಕರಣಗಳಿವೆ. ಅಲಿಸ್ಟರ್ ತಾವ್ರೋ ವಿರುದ್ದ ಕಾವೂರು ಪೊಲೀಸ್ ಠಾಣೆಯಲ್ಲಿ ಮೂರು ಎಸ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ರಾಹುಲ್ ಸಿನ್ಹ ವಿರುದ್ದ ಕಾವೂರು ಠಾಣೆಯಲ್ಲಿ ಎಸ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಆರೋಪಿಗಳನ್ನು ವಶಕ್ಕೆ ಪಡೆದು, ವಿಚಾರಿಸಿದಾಗ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದು, ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ತನಿಖೆಗಾಗಿ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ.
ಮಕ್ಕಳನ್ನು ಯಾಮಾರಿಸುವ ನಾಟಕವಾಡಿ ಅದನ್ನು ಮೊಬೈಲ್ನಲ್ಲಿ ವೀಡಿಯೋ ಮಾಡಿ ಯೂಟ್ಯೂಬ್ನಲ್ಲಿ ಅಪ್ಲೋಡ್ ಮಾಡಲೆಂದು ಈ ನಾಟಕವಾಡಿದ್ದು ಎಂದು ಆರೋಪಿಗಳು ಹೇಳಿದ್ದರು. ಘಟನೆಯ ಹಿಂದಿನ ಉದ್ದೇಶ ಸಮಗ್ರ ತನಿಖೆಯ ಬಳಿಕ ತಿಳಿದುಬರಬೇಕಿದೆ. ಆರೋಪಿಗಳು ಗಾಂಜಾ ಸೇವನೆಗೆ ಒಳಗಾಗಿದ್ದಾರೆಯೇ ಎನ್ನುವ ಬಗ್ಗೆ ಅಧ್ಯಯನ ಮಾಡಲು ಅವರ ರಕ್ತದ ಮಾದರಿಗಳನ್ನು ಕೂಡಾ ಪರಿಶೀಲನೆ ಮಾಡಲಾಗುವುದು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಬುಧವಾರ ಸಂಜೆ 7 ಗಂಟೆ ಸುಮಾರಿಗೆ 7 ರಿಂದ 11 ವರ್ಷದೊಳಗಿನ ಮೂವರು ಬಾಲಕರು ತಮ್ಮ ಮನೆಯ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಮೂವರು ವ್ಯಕ್ತಿಗಳು ದ್ವಿಚಕ್ರ ವಾಹನದಲ್ಲಿ ಬಂದು ಬಾಲಕರ ಬಳಿ ನಿಲ್ಲಿಸಿ, ಓರ್ವನ ಮೇಲೆ ಗೋಣಿ ಚೀಲದ ಮುಸುಕು ಹಾಕಿ ಹಿಡಿಯಲು ಯತ್ನಿಸಿದ್ದು, ಜೊತೆಗಿದ್ದ ಬಾಲಕ ಕಲ್ಲು, ಮಣ್ಣಿ ಎಸೆದು ದಾಳಿ ನಡೆಸಿ, ಬೊಬ್ಬೆ ಹಾಕಿ ಪರಿಸರದವರನ್ನು ಕರೆದಿದ್ದು ದುಷ್ಕರ್ಮಿಗಳು ಸಿಕ್ಕಿ ಬೀಳುವ ಅಪಾಯದಿಂದ ಕೂಡಲೇ ಅಲ್ಲಿಂದ ಪರಾರಿಯಾಗಿದ್ದರು.