ಉಡುಪಿ, ಜ. 16 (DaijiworldNews/MB) : ದೇಶದಾದ್ಯಂತ ಇಂದು ಕೊರೊನಾ ಲಸಿಕೆ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದು, ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ನಾಲ್ಕನೇ ದರ್ಜೆಯ ಸಿಬಂದ್ದಿಗಳಿಗೆ ಪ್ರಥಮ ಡೋಸ್ ನೀಡುವ ಮೂಲಕ ಅಭಿಯಾನವನ್ನು ಉದ್ಘಾಟಿಸಲಾಗಿದೆ.
ಉಡುಪಿ ಜಿಲ್ಲೆಗೆ ಮಕರ ಸಂಕ್ರಾಂತಿಯ ಈ ಶುಭದಿನದಂದು ಜಿಲ್ಲೆಗೆ ಕೊರೊನಾ ಲಸಿಕೆ ಕೋವಿಶೀಲ್ಡ್ ತಲುಪಿತ್ತು. ಮಂಗಳೂರು ಸರ್ಕಾರಿ ಔಷಧ ಉಗ್ರಾಣ ಕೇಂದ್ರದಿಂದ ಪೊಲೀಸ್ ಭದ್ರತೆಯೊಂದಿಗೆ ಉಡುಪಿ ಜಿಲ್ಲಾ ಆರೋಗ್ಯಾಧಿಕಾರಿಗಳ ಕಚೇರಿಗೆ ಬುಧವಾರ ಬೆಳಿಗ್ಗೆ ಸುಮಾರು 11:50 ಕ್ಕೆ ಲಸಿಕೆ ತಲುಪಿತ್ತು. ಜಿಲ್ಲೆಗೆ ಮೊದಲ ಹಂತದಲ್ಲಿ ಒಟ್ಟು 12,000 ಡೋಸ್ ಲಸಿಕೆ ಲಭ್ಯವಾಗಿದ್ದು ಜನವರಿ 16ರಂದು ಆರು ಕೇಂದ್ರಗಳಲ್ಲಿ ತಲಾ ನೂರರಂತೆ 600 ಕೊರೊನಾ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುತ್ತಿದೆ.
ಉಡುಪಿ ಜಿಲ್ಲೆಯ ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಇಂದು ದಿನಾಂಕ 16 ರಂದು ಕೋವಿಡ್ - 19 (ಕೋರೋನಾ ವೈರಸ್) ಲಸಿಕೆ ಉದ್ಘಾಟನೆ ನೆರವೇರಿದ್ದು ಶಾಸಕ ಶ್ರೀ ಕೆ. ರಘುಪತಿ ಭಟ್ ಅವರು ಭಾಗವಹಿಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಉಡುಪಿ ಜಿಲ್ಲಾಸ್ಪತ್ರೆ, ಉಡುಪಿ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರ, ಡಾ.ಟಿಎಂಎ ಪೈ ಆಸ್ಪತ್ರೆ, ಕುಂದಾಪುರದ ಮತ್ತು ಕಾರ್ಕಳದ ತಾಲೂಕು ಆಸ್ಪತ್ರೆ, ಕಂಡ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಅಭಿಯಾನ ನಡೆಯುತ್ತಿದೆ.
ಈ ಸಂದರ್ಭದಲ್ಲಿ ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಲಾಲಾಜಿ ಆರ್. ಮೆಂಡನ್, ನಗರಸಭೆಯ ಅಧ್ಯಕ್ಷರಾದ ಸುಮಿತ್ರಾ ಆರ್ ನಾಯಕ್, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ದಿನಕರ್ ಬಾಬು, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರಾಘವೇಂದ್ರ ಕಿಣಿ, ಉಡುಪಿ ತಾಲೂಕು ಪಂಚಾಯತ್ ಅಧ್ಯಕ್ಷರಾದ ಸಂಧ್ಯಾ ಕಾಮತ್, ನಗರ ಬಿಜೆಪಿ ಅಧ್ಯಕ್ಷರಾದ ಮಹೇಶ್ ಠಾಕೂರ್, ನಗರಸಭೆಯ ಉಪಾಧ್ಯಕ್ಷರಾದ ಲಕ್ಷ್ಮೀ ಮಂಜುನಾಥ ಕೊಳ, ಮತ್ತು ಜಿಲ್ಲಾಧಿಕಾರಿಗಳಾದ ಜಿ. ಜಗದೀಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ನವೀನ್ ಭಟ್ ವೈ, ಅಪರ ಜಿಲ್ಲಾಧಿಕಾರಿಗಳಾದ ಸದಾಶಿವ ಪ್ರಭು, ಜಿಲ್ಲಾ ಆರೋಗ್ಯಾಧಿಕಾರಿಗಳಾದ ಸುಧೀರ್ ಚಂದ್ರ ಸೂಡ, ಜಿಲ್ಲಾ ಶಸ್ತ್ರಚಿಕಿತ್ಸಕರಾದ ಮಧುಸೂದನ್ ನಾಯಕ್ ಹಾಗೂ ಪ್ರಮುಖರು ಉಪಸ್ಥಿತರಿದ್ದರು.