ಬೆಂಗಳೂರು, ಜ.16 (DaijiworldNews/PY): "ದೇಶದಲ್ಲಿ ಎಲ್ಲೆಡೆ ಒಂದೇ ಕಾಲದಲ್ಲಿ ಲಸಿಕೆ ಬಿಡುಗಡೆಯಾಗಿದೆ. ಇಂದು ಐತಿಹಾಸಿಕ ಲಸಿಕಾ ಆಂದೋಲನದ ದಿನವಾಗಿದೆ" ಎಂದು ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ನಗರದಲ್ಲಿ ಮಾತನಾಡಿದ ಅವರು, "243 ಕಡೆಗಳಲ್ಲಿ ಏಕಕಾಲಕ್ಕೆ ಲಸಿಕೆ ನೀಡುವ ಕೆಲಸ ಪ್ರಾರಂಭವಾಗಲಿದೆ. ಸುಮಾರು 24,300 ಮಂದಿಗೆ ಒಂದೇ ಜಾಗದಲ್ಲಿ ಲಸಿಕೆ ನೀಡಲಾಗುತ್ತದೆ. ಪ್ರತಿಯೋರ್ವರು ಕೂಡಾ ಸಂಪೂರ್ಣ ವಿಶ್ವಾಸದಿಂದ ಲಸಿಕೆ ತೆಗೆದುಕೊಂಡು, ಆರೋಗ್ಯ ಕಾಪಾಡಿಕೊಳ್ಳಿ. ಕೊರೊನಾ ವೈರಸ್ನಿಂದ ಶಾಶ್ವತವಾದ ಪರಿಹಾರ ಸಿಗುತ್ತದೆ. ನಮ್ಮ ದೇಶದ ವಿಜ್ಞಾನಿಗಳು ಲಸಿಕೆ ಕಂಡುಹಿಡಿದಿರುವುದು ನಮ್ಮ ದೇಶದ ಹೆಮ್ಮೆಯಾಗಿದೆ" ಎಂದರು.
"ಇಷ್ಟು ಬೇಗ ನಮ್ಮ ವಿಜ್ಞಾನಿಗಳು ಕೊರೊನಾ ಲಸಿಕೆ ಕಂಡುಹಿಡಿಯುತ್ತಾರೆ ಎಂದು ನಾನು ಭಾವಿಸಿರಲಿಲ್ಲ. ಕೆಲವೊಂದು ವೈರಸ್ಗಳಿಗೆ ವ್ಯಾಕ್ಸಿನ್ ಕಂಡುಹಿಡಿಯಲು ಸುಮಾರು 9-25 ವರ್ಷ ತೆಗೆದುಕೊಂಡರೂ ಕೂಡಾ ಸಾಧ್ಯವಾಗುತ್ತಿರಲಿಲ್ಲ. ಆದರೆ, ಒಂದು ವರ್ಷದೊಳಗೆ ಕೊರೊನಾಗೆ ಲಸಿಕೆ ಕಂಡುಹಿಡಿದಿರುವುದು ಹೆಮ್ಮೆಯ ವಿಚಾರ" ಎಂದು ಹೇಳಿದರು.