ಮಂಗಳೂರು, ಜ.16 (DaijiworldNews/PY): ಅಷ್ಟಮಿ ಸಂದರ್ಭ ವಿಭಿನ್ನ ರೀತಿಯಲ್ಲಿ ವೇಷತೊಟ್ಟು ಸಂಗ್ರಹವಾದ ಹಣವನ್ನು ಅನಾರೋಗ್ಯ ಪೀಡಿತರು ಹಾಗೂ ತೀರಾ ಬಡತನದಲ್ಲಿದ್ದವರಿಗೆ ನೀಡುವ ಮಹತ್ತರದ ಮಾನವೀಯ ಕಾರ್ಯವನ್ನು ನಡೆಸಿಕೊಂಡು ಬರುತ್ತಿರುವ ರವಿ ಕಟಪಾಡಿಯವರು ಸೋನಿ ವಾಹಿನಿಯ ಕೌನ್ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಈ ಸಂದರ್ಭ ಅವರು ಅಮಿತಾಬ್ ಬಚ್ಚನ್ ಅವರೊಂದಿಗೆ ತುಳುವಿನಲ್ಲಿ ಮಾತನಾಡಿದ್ದಾರೆ.
ಈ ವೇಳೆ ಅಮಿತಾಬ್ ಜೊತೆ ತುಳುವಿನಲ್ಲಿ ಮಾತನಾಡಿದ ರವಿ ಅವರು, "ಉಡುಪಿ ಬೊಕ್ಕ ಕುಡ್ಲದ ಮಾತಾ ಜನೊಕ್ಲುಗೆಲಾ ಎನ್ನ ಮೋಕೆದ ನಮಸ್ಕಾರ" (ಉಡುಪಿ ಹಾಗೂ ಮಂಗಳೂರಿನ ಜನತೆ ನನ್ನ ಪ್ರೀತಿಯ ನಮಸ್ಕಾರಗಳು) ಎಂದಿದ್ದಾರೆ.
ಈ ಸಂದರ್ಭ ಎಲ್ಲಾ ಪ್ರೇಕ್ಷಕರು ಚಪ್ಪಾಳೆ ತಟ್ಟಿ, ಸಂತಸ ವ್ಯಕ್ತಪಡಿಸಿದ್ದಾರೆ.
1 ವಾರದ ಹಿಂದೆ ರವಿ ಕಟಪಾಡಿಗೆ ಸೋನಿ ಟಿವಿಯಿಂದ ಕರೆ ಬಂದಿದ್ದು, ಆ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸುವುದು ತನ್ನಿಂದ ಅಸಾಧ್ಯವೆಂದು ರವಿ ಕಟಪಾಡಿ ಪ್ರತಿಕ್ರಿಯೆ ನೀಡಿದ್ದರು. ಆರಂಭದಲ್ಲಿ ಅಸಾಧ್ಯವೆಂದು ಹಿಂದಕ್ಕೆ ಸರಿದಿದ್ದರು. ಬಳಿಕ ರವಿಯವರಿಗೆ ವಾಹಿನಿಯವರು ಧೈರ್ಯ ತುಂಬಿದ್ದು, ನಿಮ್ಮ ಕೆಲಸವನ್ನು ಸಮಾಜಕ್ಕೆ ತಿಳಿಸಲು ಸಲುವಾಗಿ ಭಾಗವಹಿಸಲೇಬೇಕು ಎಂದು ವಿನಂತಿಸಿದ್ದರು. ವಾಹಿನಿಯವರೇ ರವಿಯವರಿಗೆ ಧೈರ್ಯ ತುಂಬಿದ ಬಳಿಕ ಅವರು ಸಮ್ಮತಿ ಸೂಚಿಸಿದ್ದರು.
ಜನವರಿ 15ರಂದು ಸೋನಿ ವಾಹಿನಿಯಲ್ಲಿ ಪ್ರಸಾರಗೊಂಡ ಈ ಕಾರ್ಯಕ್ರಮದಲ್ಲಿ ರವಿ ಅವರು ಆರಂಭಿಕ 7 ಪ್ರಶ್ನೆಗಳಿಗೆ ಉತ್ತರಿಸಿದ್ದು, ಮುಂದಿನ ಪ್ರಶ್ನೆಗಳಿಗೆ ಅಂಬಾ ಬೆಹಾನ್ ಉತ್ತರಿಸಿದ್ದರು. ಅಲ್ಲದೇ, ಹಿರಿಯ ನಟ ಅನುಪಮ್ ಖೇರ್ ಜೊತೆಯಾಗಿ ಸಹಕಾರ ನೀಡಿದ್ದರು.
ರವಿ ಕಟಪಾಡಿ ಹಾಗೂ ಅಂಬಾ ಬೆಹಾನ್ ಅವರು ಜೊತೆಯಾಗಿ 12.5 ಲಕ್ಷ.ರೂ ಮೊತ್ತ ಪಡೆದು ವಿಜೇತರಾಗಿದ್ದಾರೆ.