ಬೆಂಗಳೂರು,ಜ.16 (DaijiworldNews/HR): ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ 48 ಗಂಟೆಗಳಲ್ಲಿಯೇ ಬೀಳಗಿ ಶಾಸಕ ಮುರುಗೇಶ್ ನಿರಾಣಿ ಅವರ ವಿರುದ್ಧ ಅಲಂ ಪಾಷಾ ಎಂಬವರು ವಂಚನೆ ಆರೋಪ ಮಾಡಿದ್ದಾರೆಂದು ತಿಳಿದು ಬಂದಿದೆ.
ದೂರುದಾರರಾದ ಅಲಂ ಪಾಷಾ ಎಂಬವರು ಎಂ.ಡಿಯಾಗಿರುವ ಪಾಷ್ ಸ್ಪೇಸ್ ಇಂಟರ್ನ್ಯಾಷನಲ್ ಎಂಬ ಕಂಪನಿ 600 ಕೋಟಿ ಮೊತ್ತದ ಹೌಸಿಂಗ್ ಪ್ರಾಜೆಕ್ಟ್ ಪ್ರೊಪೋಸಲ್ ನೀಡಿದ್ದು,ಇದಕ್ಕೆ ಅನುಮೋದನೆ ಸಿಕ್ಕಿ ದೇವನಹಳ್ಳಿಯ ಕೈಗಾರಿಕಾ ಪ್ರದೇಶದಲ್ಲಿ 26 ಎಕರೆ ಜಮೀನು ಮಂಜೂರು ಮಾಡಲಾಗಿತ್ತು, ಆದರೆ 2011ರಲ್ಲಿ ಮಂಜೂರಾತಿ ಆದೇಶವನ್ನು ಹಿಂಪಡೆದಿದ್ದು ಬಳಿಕ ಆ ಜಮೀನನ್ನು ಬೇರೆಯವರಿಗೆ ಮಾರಾಟ ಮಾಡಲಾಗಿತ್ತು ಎಂದು ಆರೋಪಿಸಿದ್ದಾರೆ.
ಇನ್ನು "ಯಡಿಯೂರಪ್ಪ ಮತ್ತು ಮುರುಗೇಶ್ ನಿರಾಣಿ ಅವರು ಅಲಂ ಪಾಷಾ ಅವರ ಸಂಸ್ಥೆಯ ಹೆಸರಿನಲ್ಲಿ ಸುಳ್ಳು ದಾಖಲಾತಿ ಸೃಷ್ಟಿಸಿ ಮಂಜೂರಾತಿ ಹಿಂಪಡೆಯಲಾಗಿದೆ ಎಂದು 2012ರಲ್ಲಿ ಲೋಕಾಯುಕ್ತ ಪೊಲೀಸರಲ್ಲಿ ಖಾಸಗಿ ದೂರು ದಾಖಲಿಸಿದ್ದು, 2013ರಲ್ಲಿ ಪ್ರಕರಣದಲ್ಲಿ ಚಾರ್ಜ್ಶೀಟ್ ಸಲ್ಲಿಕೆಯಾಯಿತು. ಮುಖ್ಯಮಂತ್ರಿಯಾದ ತಮ್ಮ ವಿರುದ್ಧ ತನಿಖೆ ನಡೆಸಲು ಪೊಲೀಸರಿಗೆ ರಾಜ್ಯಪಾಲರ ಅನುಮತಿ ಇಲ್ಲ ಎಂದು ವಾದಿಸಿ ಯಡಿಯೂರಪ್ಪ ಅವರು ಹೈಕೋರ್ಟ್ ಮೊರೆ ಹೋಗಿದ್ದು ಬಳಿಕ ಪ್ರಕರಣ ವಜಾ ಆಯಿತು" ಎಂದು ಪಾಷಾ ತಿಳಿಸಿದ್ದಾರೆ.