ಬೆಂಗಳೂರು,ಜ.16 (DaijiworldNews/HR): ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶನಿವಾರದಿಂದ ಎರಡು ದಿನ ಕರ್ನಾಟಕಕ್ಕೆ ಭೇಟಿ ನೀಡಲಿದ್ದು, ಈ ಸಂದರ್ಭದಲ್ಲಿ ಅವರು ಬೆಳಗಾವಿ ಜಿಲ್ಲೆಯಲ್ಲಿ ರಾಜಕೀಯ ರ್ಯಾಲಿಯನ್ನು ಉದ್ದೇಶಿಸಿ ಹಲವಾರು ಯೋಜನೆಗಳನ್ನು ಪ್ರಾರಂಭಿಸಲಿದ್ದಾರೆ.
ಸಚಿವ ಸಂಪುಟ ವಿಸ್ತರಣೆ ವಿಚಾರದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ, ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಸೇರಿ ಹಲವರು ಮುಖ್ಯಮಂತ್ರಿ ವಿರುದ್ಧ ಟೀಕಾ ಪ್ರಹಾರ ನಡೆಸುತ್ತಿರುವ ಸಂದರ್ಭದಲ್ಲಿ ಈ ಸಭೆ ಮಹತ್ವ ಪಡೆದಿದೆ ಎನ್ನಲಾಗಿದೆ.
ಅಮಿತ್ ಶಾ ಬೆಂಗಳೂರಿಗೆ ಭೇಟಿ ವೇಳೆ ಸಂಪುಟದ ಹಿರಿಯ ಸದಸ್ಯರನ್ನು ಭೇಟಿ ಮಾಡಲು ಬಯಸಿದ್ದು, ಎಲ್ಲರ ಭೇಟಿ ಕಷ್ಟ ಆಗಲಿದೆ ಎಂಬ ಕಾರಣಕ್ಕೆ, ಹಿರಿಯ ಸಚಿವರನ್ನು ಭೇಟಿ ಮಾಡಿ ಚರ್ಚಿಸಲಿದ್ದಾರೆ. ಸಭೆಯಲ್ಲಿ ಉಪಚುನಾವಣೆಗಳ ಅಭ್ಯರ್ಥಿ ಆಯ್ಕೆ, ಪಕ್ಷದ ಶಾಸಕರು ಶಿಸ್ತು ಕಾಪಾಡುವುದೂ ಸೇರಿ ಹಲವು ವಿಷಯಗಳು ಚರ್ಚೆ ಆಗಲಿವೆ ಎಂದು ಮೂಲಗಳು ತಿಳಿಸಿವೆ.
ಇನ್ನು ಶಾ ಅವರು ಶನಿವಾರ ಬೆಳಿಗ್ಗೆ 11.30 ಕ್ಕೆ ಬೆಂಗಳೂರಿಗೆ ಬಂದು ಬಳಿಕ ಶಿವಮೊಗ್ಗಕ್ಕೆ ತೆರಳಲಿದ್ದು, ಮಧ್ಯಾಹ್ನ 1.30 ಕ್ಕೆ ಭದ್ರಾವತಿಯಲ್ಲಿ ಕ್ಷಿಪ್ರ ಕಾರ್ಯಾಚರಣೆ ಪಡೆ ಕೇಂದ್ರದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಬಳಿಕ ಸಂಜೆ 5 ಗಂಟೆಗೆ ವಿಧಾನಸೌಧದಲ್ಲಿ ತುರ್ತು ನಿರ್ವಹಣೆ ವ್ಯವಸ್ಥೆ, ಪೊಲೀಸ್ ಗೃಹ 2025 ಮತ್ತು ಮೀಸಲು ಪಡೆಯ ಆಡಳಿತ ಕಚೇರಿ ಕಟ್ಟಡದ ಉದ್ಘಾಟನೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ರಾತ್ರಿ 7.40 ಕ್ಕೆ ಪ್ರಮುಖ ನಾಯಕರ ಸಮಿತಿ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ.
ರವಿವಾರ ಬಾಗಲಕೋಟೆ ಮತ್ತು ಬೆಳಗಾವಿಯಲ್ಲಿ ಜನ ಸೇವಕ ಸಮಾವೇಶದ ಸಮಾರೋಪ ಸೇರಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಬಳಿಕ ದಿವಂಗತ ಸುರೇಶ್ ಅಂಗಡಿಯವರ ಮನೆಗೂ ಭೇಟಿ ನೀಡಿ ಅಲ್ಲಿಂದ ದೆಹಲಿಗೆ ವಾಪಸಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.