ಬೆಂಗಳೂರು, ಜ. 16 (DaijiworldNews/MB) : ಬಿಜೆಪಿ ನಾಯಕರ ಹೆಸರು ಹೇಳಿ ವಂಚನೆ ಮಾಡುತ್ತಿದ್ದ ಯುವರಾಜ್ ಸ್ವಾಮಿ ವಿರುದ್ಧ ಮತ್ತೆ ಎರಡು ಎಫ್ಐಆರ್ ದಾಖಲಾಗಿದೆ.
ಕಮಲನಗರ ನಿವಾಸಿ ಡಾಕ್ಟರ್ ನರಸಿಂಹ ಸ್ವಾಮಿ ಎಂಬವರು ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಯುವರಾಜ್ ಸ್ವಾಮಿ ವಿರುದ್ದ ದೂರು ದಾಖಲಿಸಿದ್ದಾರೆ. ಗೋವಿಂದಯ್ಯ ಎಂಬುವವರು ಕೂಡಾ ಇದೇ ಪೊಲೀಸ್ ಠಾಣೆಯಲ್ಲಿ ಯುವರಾಜ್ ಸ್ವಾಮಿ ವಿರುದ್ಧ ದೂರು ದಾಖಲಿಸಿದ್ದಾರೆ.
ನರಸಿಂಹ ಸ್ವಾಮಿ ಅವರ ಮಗನಿಗೆ ಸರ್ಕಾರಿ ಕೆಲಸ ಕೊಡಿಸುವುದಾಗಿ 70 ಲಕ್ಷ ಪಡೆದು ವಂಚಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದ್ದು ಇನ್ನೊಂದೆಡೆ ಗೋವಿಂದ ಅವರ ಅಳಿಯ ವೇಣುಗೋಪಾಲ್ ಎಂಬುವವರಿಗೆ ಕೆಎಂಎಫ್ ನಲ್ಲಿ ಮಾರ್ಕೆಟಿಂಗ್ ಮ್ಯಾನೇಜರ್ ಹುದ್ದೆ ಕೊಡಿಸುವುದಾಗಿ ಹೇಳಿ 30 ಲಕ್ಷ ರೂಪಾಯಿ ವಂಚಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಪ್ರಸ್ತುತ ವಂಚಕ ಯುವರಾಜ್ ಸ್ವಾಮಿ ಸಿಸಿಬಿ ವಶದಲ್ಲಿದ್ದಾರೆ. ನಗರದ ಹಲವು ಪೊಲೀಸ್ ಠಾಣೆಗಳಲ್ಲಿ ಯುವರಾಜ್ ಸ್ವಾಮಿ ವಿರುದ್ದ ಪ್ರಕರಣಗಳು ದಾಖಲಾಗಿದೆ. ಹೀಗಾಗಿ ಎಲ್ಲಾ ಪ್ರಕರಣಗಳನ್ನು ವರ್ಗಾವಣೆ ಮಾಡಿಸಿಕೊಂಡು ಸಿಸಿಬಿ ತನಿಖೆ ನಡೆಸುತ್ತಿದೆ.