ಚೆನ್ನೈ, ಜ. 15 (DaijiworldNews/MB) : ರಾಜಕಾರಣಿಯಾಗಿ ಬದಲಾಗಿರುವ ನಟ ಕಮಲ್ ಹಾಸನ್ ಸ್ಥಾಪಿಸಿದ ರಾಜಕೀಯ ಪಕ್ಷ ಮಕ್ಕಳ್ ನೀಧಿ ಮಯ್ಯಂಗೆ ಭಾರತ ಚುನಾವಣಾ ಆಯೋಗ ಟಾರ್ಚ್ ಲೈಟ್ ಚಿಹ್ನೆಯನ್ನು ನೀಡಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಎಂಎನ್ಎಂ ಪಕ್ಷಕ್ಕೆ ಟಾರ್ಚ್ ಲೈಟ್ ಚಿಹ್ನೆಯನ್ನು ನೀಡಲಾಗಿದೆ ಎಂದು ತಿಳಿಸಲು ನನಗೆ ಸಂತೋಷವಾಗಿದೆ. ಅಮೆರಿಕದ ನಾಗರಿಕ ಹಕ್ಕುಗಳ ಹೋರಾಟಗಾರ ಮಾರ್ಟಿನ್ ಲೂಥರ್ ಕಿಂಗ್ ಅವರ ಜನ್ಮದಿನದಂದು ಈ ಚಿಹ್ನೆಯನ್ನು ಪಡೆದಿರುವುದು ಸಂತೋಷವಾಗಿದೆ" ಎಂದು ಹೇಳಿದ್ದಾರೆ.
ಈ ಟ್ವೀಟ್ನೊಂದಿಗೆ ವಿಡಿಯೋವೊಂದನ್ನು ಕೂಡಾ ಅವರು ಪೋಸ್ಟ್ ಮಾಡಿದ್ದಾರೆ. ''ಎಲ್ಲಾ 234 ಕ್ಷೇತ್ರಗಳಲ್ಲಿ ಟಾರ್ಚ್ ಲೈಟ್ ಚಿಹ್ನೆಯನ್ನು ತಮ್ಮ ಪಕ್ಷಕ್ಕೆ ನೀಡಲಾಗಿದೆ'' ಎಂದು ತಿಳಿಸಿದ್ದಾರೆ.
2019 ರಲ್ಲಿ ಲೋಕಸಭೆ ಚುನಾವಣೆ ಸಂದರ್ಭ ಚುನಾವಣಾ ಆಯೋಗ ಎಂ.ಎನ್.ಎಂ ಪಕ್ಷಕ್ಕೆ ಟಾರ್ಚ್ ಲೈಟ್ ಚಿಹ್ನೆ ನೀಡಿತ್ತು. ಆದರೆ ವಿಧಾನಸಭೆ ಚುನಾವಣೆಗೂ ಮುನ್ನ ಈ ಚಿಹ್ನೆಯನ್ನು ಆಯೋಗ ಮತ್ತೊಂದು ಪಕ್ಷಕ್ಕೆ ನೀಡಿತ್ತು. ಇದನ್ನು ಪ್ರಶ್ನಿಸಿ ಕಮಲ್ ಹಾಸನ್ ಹೈಕೋರ್ಟ್ ಮೆಟ್ಟಿಲೇರಿದ್ದರು.