ವಿಜಯಪುರ, ಜ. 15 (DaijiworldNews/MB) : ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ನೀಡಿದ್ದ ವಿಶೇಷ ವೈಯಕ್ತಿಕ ಭದ್ರತೆಯನ್ನು ರಾಜ್ಯ ಸರಕಾರ ವಾಪಸ್ ಪಡೆದಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ದ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಯತ್ನಾಳ್, ''ನನಗೆ ಏನಾದರೂ ತೊಂದರೆಗಳಾಗಲೀ ಅಥವಾ ಅನಾಹುತಗಳೇನಾದರೂ ಆದರೆ ಅದಕ್ಕೆ ಆಡಳಿತ ನಡೆಸುತ್ತಿರುವ ಬಿ ಎಸ್ ಯಡಿಯೂರಪ್ಪರ ಸರ್ಕಾರ ಹೊಣೆ'' ಎಂದು ಹೇಳಿದ್ದಾರೆ.
ಈ ಸಂಬಂಧ ಸಿಎಂ ಯಡಿಯೂರಪ್ಪ, ಗೃಹ ಸಚಿವ, ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿರುವ ಅವರು, ''ನಾನು ಪ್ರಖರ ಹಿಂದುಪರವಾದ ಮತ್ತು ಜನಪರ ಹೋರಾಟ ಮತ್ತು ಸಂಘಟನೆಯಲ್ಲಿ ತೊಡಗಿಸಿಕೊಂಡಿರುವುದರಿಂದ ಹಿಂದೆ ನನ್ನ ಮೇಲೆ ಅನೇಕ ಬಾರಿ ಕೆಲವು ಹಿಂದು ವಿರೋಧಿ ಸಂಘಟನೆಗಳು ಮತ್ತು ಮತಾಂಧ ಶಕ್ತಿಗಳು ದಾಳಿ ಮಾಡುವ ದುರುದ್ದೇಶದ ಮುನ್ಸೂಚನೆಯನ್ನು ಅರಿತ ಸರ್ಕಾರದ ಪೊಲೀಸ್ ಗುಪ್ತಚರ ಇಲಾಖೆಯ ಆದೇಶದ ಮೇರೆಗೆ ನನಗೆ ಸೂಕ್ತ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿತ್ತು. ಆದರೆ ನಾನು ಮುಖ್ಯಮಂತ್ರಿಯವರ ವಿರುದ್ದ ಹೇಳಿಕೆ ನೀಡಿದ್ದೇನೆ ಎಂಬ ಕಾರಣಕ್ಕೆ ಇಂದು ಮುಖ್ಯಮಂತ್ರಿಗಳು ಸೇಡಿನ ರಾಜಕಾರಣ ಮಾಡಿ ಪೊಲೀಸ್ ಭದ್ರತೆಯನ್ನು ಹಿಂಪಡೆದಿದ್ದಾರೆ'' ಎಂದು ದೂರಿದ್ದಾರೆ.
''ನೀವು ನಿಮ್ಮ ಹಳೇ ಚಾಳಿಯನ್ನು ಮುಂದುವರೆಸಿ ದ್ವೇಷದ ರಾಜಕಾರಣಕ್ಕೆ ಮುಂದಾಗಿದ್ದೀರಿ ಎಂದು ಬಿಎಸ್ವೈನ್ನು ಉದ್ದೇಶಿಸಿ ಹೇಳಿರುವ ಅವರು, ಈ ಮೂಲಕ ನನ್ನ ಜನಪರ, ಹಿಂದೂಪರ, ಅನ್ಯಾಯದ ವಿರುದ್ದದ ಹೋರಾಟವನ್ನು ಹತ್ತಿಕ್ಕಲಾಗದು'' ಎಂದು ಹೇಳಿದ್ದಾರೆ.
''ಹಾಗೆಯೇ ಮುಂದಿನ ದಿನಗಳಲ್ಲಿ ನನಗೆ ಏನಾದರೂ ತೊಂದರೆಯಾದರೆ ಅದಕ್ಕೆ ಸರ್ಕಾರ ಹೊಣೆಯಾಗುತ್ತದೆ. ನಿಮ್ಮ ಕೀಳುಮಟ್ಟದ ಕಾರ್ಯವೈಖರಿ ಹಾಗೂ ಸೇಡಿನ ರಾಜಕೀಯಕ್ಕೆ ನನ್ನ ಧಿಕ್ಕಾರವಿದೆ'' ಎಂದು ಕೂಡಾ ಹೇಳಿದ್ದಾರೆ.