ನವದೆಹಲಿ, ಜ. 15 (DaijiworldNews/MB) : ಕೃಷಿ ಕಾಯ್ದೆಗಳ ಬಗ್ಗೆ ರೈತರು ಹಾಗೂ ಸರ್ಕಾರದ ನಡುವೆ ನಡೆದ 9ನೇ ಸುತ್ತಿನ ಮಾತುಕತೆ ಕೂಡ ವಿಫಲವಾಗಿದೆ. ಮುಂದಿನ ಸುತ್ತಿನ ಮಾತುಕತೆ ಜನವರಿ 19 ರಂದು ಮಧ್ಯಾಹ್ನ 12.00 ಗಂಟೆಗೆ ನಿಗದಿ ಮಾಡಲಾಗಿದೆ.
ರೈತರು ಈ ಮೂರು ಕೃಷಿ ಕಾಯ್ದೆಗಳನ್ನು ರದ್ದುಪಡಿಸಬೇಕು ಎಂಬ ತಮ್ಮ ಬೇಡಿಕೆಯನ್ನು ಸರ್ಕಾರದ ಮುಂದೆ ಈ ಮಾತುಕತೆಯಲ್ಲೂ ಪ್ರಸ್ತಾಪಿಸಿದ್ದು ಆದರೆ ಸರ್ಕಾರ ಇದಕ್ಕೆ ತಿರಸ್ಕರಿಸಿದೆ. ಸರ್ಕಾರ ಕೆಲವು ತಿದ್ದುಪಡಿ ಮಾಡಲಾಗುವುದು ಎಂದು ರೈತರಿಗೆ ತಿಳಿಸಿದ್ದು ಆದರೆ ರೈತರು ಸರ್ಕಾರದ ಈ ಪ್ರಸ್ತಾಪವನ್ನು ತಿರಸ್ಕರಿಸಿದ್ದಾರೆ ಎಂದು ವರದಿಯಾಗಿದೆ.
ಇಂದಿನ ಸಭೆಯಲ್ಲಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ವಾಣಿಜ್ಯ ಸಚಿವ ಸೋಮ್ ಪ್ರಕಾಶ್, ರೈಲ್ವೆ, ವಾಣಿಜ್ಯ ಮತ್ತು ಆಹಾರ ಸಚಿವ ಪಿಯೂಷ್ ಗೋಯಲ್ ಹಾಗೂ ಸುಮಾರು 40 ರೈತ ಸಂಘಟನೆಗಳ ಪ್ರತಿನಿಧಿಗಳು ಇದ್ದರು ಎಂದು ತಿಳಿದು ಬಂದಿದೆ.
ಇನ್ನು ಈ ಸಭೆಯ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ''ಇಂದು ರೈತ ಮುಖಂಡರೊಂದಿಗೆ ನಡೆಸಿದ ಮಾತುಕತೆ ನಿರ್ಣಾಯಕವಲ್ಲ. ಮತ್ತೆ ಜ. 19ರಂದು ಮಾತುಕತೆ ನಡೆಸಲಾಗುವುದು. ಈ ಸಭೆಯಲ್ಲಿ ಪರಿಹಾರ ಕಂಡುಕೊಳ್ಳುವ ವಿಶ್ವಾಸ ನಮಗಿದೆ'' ಎಂದು ಹೇಳಿದರು.
ಕೇಂದ್ರದ ಕೃಷಿ ಕಾಯ್ದೆಗಳನ್ನು ರದ್ದು ಪಡಿಸುವಂತೆ ಆಗ್ರಹಿಸಿ ಕಳೆದ 50 ದಿನಗಳಿಂದ ದೆಹಲಿಯ ವಿವಿಧ ಗಡಿಗಳಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.