ಮಂಗಳೂರು, ಜ.15 (DaijiworldNews/HR): ರಾಜ್ಯದ ನೂತನ ಸಚಿವರಾಗಿ ಸಂಪುಟಕ್ಕೆ ಸೇರ್ಪಡೆಗೊಂಡ ಸಚಿವ ಎಸ್. ಅಂಗಾರ ಅವರು ಜನವರಿ 15 ರಂದು ಮಂಗಳೂರಿನ ಬಿಜೆಪಿ ಕಚೇರಿಗೆ ಭೇಟಿ ನೀಡಿ, ಕೊಟ್ಟಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುಸುವುದಾಗಿ ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಬಳಿಕ ಮಾತನಾಡಿದ ಅವರು, "ಆರ್ಎಸ್ಎಸ್ ಮತ್ತು ಪಕ್ಷವು ಈ ಮಟ್ಟಕ್ಕೆ ಬೆಳೆಯಲು ನನಗೆ ಸಹಾಯ ಮಾಡಿದೆ. ನನಗೆ ನೀಡಲಾಗಿರುವ ಕೆಲಸಗಳನ್ನು ಸಮರ್ಪಕವಾಗಿ ನಿರ್ವಹಿಸುತ್ತೇನೆ ಮತ್ತು ಜನರು ನನ್ನ ಮೇಲೆ ಇಟ್ಟಿರುವ ನಂಬಿಕೆಗೆ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳುತ್ತೇನೆ" ಎಂದರು.
"ನಾನು ಪಕ್ಷಕ್ಕೆ ನಿಷ್ಠನಾಗಿರುತ್ತೇನೆ, ಅಧಿಕಾರಕ್ಕಾಗಿ ಯಾವತ್ತೂ ದುರಾಸೆ ತೋರಿಸಿಲ್ಲ. ಕೈಯಲ್ಲಿರುವ ಪರಿಸ್ಥಿತಿಯನ್ನು ಪರಿಗಣಿಸಿ ನಾನು ಕೆಲಸವನ್ನು ನಿರ್ವಹಿಸುತ್ತೇನೆ. ಇಂದು ನನಗೆ ದೊರೆತ ಸನ್ಮಾನವೆಂದರೆ ಪಕ್ಷದ ಸಂಘಟನೆಗೆ ನೀಡಲಾಗುವ ಗೌರವ" ಎಂದು ಹೇಳಿದ್ದಾರೆ.
ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, “ಇಂದು ಅಂಗಾರ ಅವರಿಗೆ ಸಚಿವ ಹುದ್ದೆ ದೊರೆತಿರುವುದು ಇಡೀ ಜಿಲ್ಲೆಗೆ ಸಂಭ್ರಮ, ನಾನು ರಾಜ್ಯ ಬಿಜೆಪಿಯ ಅಧ್ಯಕ್ಷನಾದಾಗ ಸಮಯದಲ್ಲಿ ಕ್ಯಾಬಿನೆಟ್ ರಚನೆಯಾಗಿದ್ದು ಆಗ ಅಂಗರ ಅವರ ಹೆಸರು ಬರದಕಾರಣ ನನಗೆ ಬೇಸರವಾಗಿತ್ತು. ಆದರೆ ಈಗ ಅವರಿಗೆ ಸಚಿವ ಸ್ಥಾನ ಲಭಿಸಿರುವುದು ಸಂತಸದ ವಿಷಯ. ಅಂಗಾರ ಅವರು ರಾಜ್ಯದ ಅತ್ಯುತ್ತಮ ಮಂತ್ರಿಯಾಗಲಿದ್ದಾರೆ, ಅವರ ಕಾರ್ಯದ ಬಗ್ಗೆ ಅನುಮಾನಿಸುವ ಅಗತ್ಯವಿಲ್ಲ" ಎಂದು ಹೇಳಿದ್ದಾರೆ.
ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ಮೂಡುಬಿದ್ರೆ ಮಾತನಾಡಿ, “ಬಿಜೆಪಿ ಪ್ರತಿನಿಧಿಗಳ ಪಕ್ಷ ಎಂದು ಮತ್ತೊಮ್ಮೆ ಸಾಬೀತಾಗಿದೆ. ಈ ಜಿಲ್ಲೆಯು ಅಂಗಾರ ಅವರ ಸಚಿವಾಲಯದ ಅಡಿಯಲ್ಲಿ ಅಭಿವೃದ್ಧಿಗೆ ಸಾಕ್ಷಿಯಾಗಲಿ. ನಳಿನ್ ಕುಮಾರ್ ಕಟೀಲ್ ಬಿಜೆಪಿಯ ರಾಜ್ಯ ಅಧ್ಯಕ್ಷರಾದ ನಂತರ, ಪಕ್ಷದ ಪ್ರತಿನಿಧಿಗಳು ಅವರ ಪ್ರಾಮಾಣಿಕ ಕಾರ್ಯಕ್ಕೆ ಸಾಕಷ್ಟು ಗೌರವವನ್ನು ಪಡೆಯುತ್ತಿದ್ದಾರೆ" ಎಂದರು.
ಶಾಸಕರಾದ ವೇದಾವ್ಯಸ ಕಾಮತ್, ಸಂಜೀವ ಮಾಠಂದೂರ್, ಮೇಯರ್ ದಿವಾಕರ್ ಪಾಂಡೇಶ್ವರ ಮತ್ತು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೊಡು ಉಪಸ್ಥಿತರಿದ್ದರು.