ವಿಜಯಪುರ,ಜ.15 (DaijiworldNews/HR): "ಕೇಂದ್ರ ಸರ್ಕಾರ ಜಾರಿಗೊಳಿಸಿರುವ ನೂತನ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟವನ್ನು ಬೆಂಬಲಿಸಿ ಕೆಪಿಸಿಸಿ ವತಿಯಿಂದ ಜ.20 ರಂದು ಬೆಂಗಳೂರಿನಲ್ಲಿ ರೈತರ ಅಧಿಕಾರ ದಿನ ಆಯೋಜಿಸಿ,ರಾಜ್ಯಪಾಲರ ನಿವಾಸಕ್ಕೆ ಮುತ್ತಿಗೆ ಹಾಕಲಾಗುವುದು" ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ ತಿಳಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ರೈತರ ಅಧಿಕಾರ ದಿನದ ಅಂಗವಾಗಿ ಜ.20 ರಂದು ಬೆಳಗ್ಗೆ 10.30ಕ್ಕೆ ಫ್ರೀಡಂ ಪಾರ್ಕ್ನಿಂದ ಬೃಹತ್ ಪಾದಯಾತ್ರೆ ಮೂಲಕ ತೆರಳಿ ರಾಜ್ಯಪಾಲರ ನಿವಾಸಕ್ಕೆ ಮುತ್ತಿಗೆ ಹಾಕಲಾಗುವುದು" ಎಂದು ತಿಳಿಸಿದ್ದಾರೆ.
ಇನ್ನು ಸಿ.ಡಿ ವಿಚಾರವಾಗಿ ಮಾತನಾಡಿದ ಅವರು, "ಯಡಿಯೂರಪ್ಪನವರಿಗೆ ಸಂಬಂಧಿಸಿದ ಸಿ.ಡಿ. ಇಟ್ಟುಕೊಂಡು ಬ್ಲ್ಯಾಕ್ಮೇಲ್ ಮಾಡಿ, ಹಣ ನೀಡಿ ಕೆಲವರು ಸಚಿವರಾಗಿದ್ದಾರೆ ಎಂದು ಬಿಜೆಪಿ ಶಾಸಕರು ಗಂಭೀರ ಆರೋಪ ಮಾಡಿದ್ದು, ಈ ಕುರಿತು ಹೈಕೋರ್ಟ್ನ ನ್ಯಾಯಾಧೀಶರಿಂದ ತನಿಖೆಯಾಗಬೇಕು" ಎಂದು ಆಗ್ರಹಿಸಿದ್ದಾರೆ.