ನವದೆಹಲಿ,ಜ.15 (DaijiworldNews/HR): "ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಮಸೂದೆಯನ್ನು ವಿರೋಧಿಸುತ್ತಿರುವ ರೈತರು ಮತ್ತು ಕೇಂದ್ರದ ನಡುವೆ ಉಂಟಾಗಿರುವ ಬಿಕ್ಕಟ್ಟಿನ ಶಮನಕ್ಕೆ ನಾಲ್ವರು ಸದಸ್ಯರ ಸಮಿತಿಯನ್ನು ಸುಪ್ರೀಂ ಕೋರ್ಟ್ ರಚಿಸಿದ್ದು, ಸುಪ್ರೀಂನ ಈ ಆದೇಶವನ್ನು ಸರ್ಕಾರ ಸ್ವಾಗತಿಸುತ್ತದೆ" ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, "ಕೃಷಿ ಮಸೂದೆ ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಆದೇಶವನ್ನು ಸರ್ಕಾರ ಸ್ವಾಗತಿಸುತ್ತದೆ. ನ್ಯಾಯಾಲಯದಿಂದ ನೇಮಿಸಲ್ಪಟ್ಟ ಸಮಿತಿಯ ಮುಂದೆ ನಮ್ಮ ಅಭಿಪ್ರಾಯಗಳನ್ನು ಇಡಲಿದ್ದೇವೆ" ಎಂದರು.
ಇನ್ನು ಮೂರೂ ಕೃಷಿ ಕಾಯ್ದೆಗಳ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಸಲ್ಲಿಕೆಯಾಗಿರುವ ಅನೇಕ ಅರ್ಜಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬ್ಡೆ, ನ್ಯಾಯಮೂರ್ತಿಗಳಾದ ಎ.ಎಸ್. ಬೋಪಣ್ಣ ಮತ್ತು ವಿ. ರಾಮಸುಬ್ರಮಣಿಯನ್ ಅವರ ಪೀಠವು ನಡೆಸಿತ್ತು. ಬಿಕ್ಕಟ್ಟು ಪರಿಹಾರಕ್ಕೆ ನೇಮಿಸಿರುವ ಸಮಿತಿಯು ರೈತರ ಸಮಸ್ಯೆಗಳನ್ನು ಆಲಿಸಲಿದೆ ಎಂದು ಪೀಠವು ಹೇಳಿತ್ತು.