ಬೆಳಗಾವಿ,ಜ.15 (DaijiworldNews/HR): "ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಆರ್ಎಸ್ಎಸ್ ಟೋಪಿ ಹಾಕಿದ್ದನ್ನು ನಾನೇನೂ ನೋಡಿಲ್ಲ. ಆದರೆ ಮುಸ್ಲಿಂ ಟೋಪಿ ಹಾಕಿರುವ ಬಹಳಷ್ಟು ಫೋಟೊಗಳು ನಮ್ಮಲ್ಲಿವೆ" ಎಂದು ಹೇಳಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ಸಹೋದರ ರಮೇಶ ಜಾರಕಿಹೊಳಿ ಮುಸ್ಲಿಂ ಟೋಪಿ ಹಾಕಿದ್ದ ಫೋಟೊ ತೋರಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸತೀಶ್, "ನಮ್ಮ ಕುಟುಂಬ ಸಂಘ ಪರಿವಾರದಲ್ಲಿ ಇರಲಿಲ್ಲ, ಆದರೆ ಯಾವಾಗ ಆರ್ಎಸ್ಎಸ್ನಲ್ಲಿ ರಮೇಶ್ ಇದ್ದರು ಎಂಬುದು ನಮಗೆ ತಿಳಿದಿಲ್ಲ, ಮುಸ್ಲಿಂ ಪರವಾಗಿ ಇದ್ದರು ಎಂಬುದು ಗೊತ್ತು. ಆರ್ಎಸ್ಎಸ್ಗೂ ನಮ್ಮ ಕುಟುಂಬಕ್ಕೂ ಯಾವುದೇ ಸಂಬಂಧ ಇಲ್ಲ" ಎಂದು ಹೇಳಿದ್ದಾರೆ.
ಇನ್ನು "ಗೋವಾ ವಿಮೋಚನೆ ಚಳವಳಿಗೂ ಆರ್ಎಸ್ಎಸ್ಗೂ ಯಾವುದೇ ಸಂಬಂಧವಿಲ್ಲ, ರಮೇಶ ಜಾರಕಿಹೊಳಿ ಕಾಂಗ್ರೆಸ್ನಲ್ಲಿದ್ದಾಗ ಮುಸ್ಲಿಂ ಟೋಪಿ ಹಾಕಿಕೊಂಡಿದ್ದರು. ಆರ್ಎಸ್ಎಸ್ನ ಕಪ್ಪು ಟೋಪಿ ಹಾಕಿಕೊಂಡಿರುವ ಬಗ್ಗೆ ನಮಗೆ ಗೊತ್ತಿಲ್ಲ" ಎಂದರು.