ನವದೆಹಲಿ, ಜ.15 (DaijiworldNews/HR): ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಮಸೂದೆಯನ್ನು ರದ್ದುಗೊಳಿಸುವಂತೆ ಆಗ್ರಹಿಸಿ ರೈತರು ನಡೆಸುತ್ತಿರುವ ಸತ್ಯಾಗ್ರಹವನ್ನು ಬೆಂಬಲಿಸುವಂತೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮನವಿ ಮಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, "ರೈತರ ಪ್ರತಿಭಟನೆಗೆ ಬೆಂಬಲ ನೀಡುವ ಜತೆಗೆ ದೇಶದಲ್ಲಿ ಏರುತ್ತಿರುವ ತೈಲ ಬೆಲೆ ವಿರುದ್ಧವೂ ಹೋರಾಟ ನಡೆಸಬೇಕು, ದೇಶದ ರೈತರು ತಮ್ಮ ಹಕ್ಕುಗಳನ್ನು ಗೆಲ್ಲುವುದಕ್ಕಾಗಿ ಸೊಕ್ಕಿನ ಮೋದಿ ಸರ್ಕಾರದ ವಿರುದ್ಧ ಸತ್ಯಾಗ್ರಹ ನಡೆಸುತ್ತಿದ್ದಾರೆ" ಎಂದರು.
ಇನ್ನು "ರೈತರ ಮೇಲೆ ನಡೆಯುತ್ತಿರುವ ದೌರ್ಜನ್ಯ ಮತ್ತು ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯ ವಿರುದ್ಧ ಇಡೀ ಭಾರತ ಇಂದು ಧ್ವನಿ ಎತ್ತುತ್ತಿದೆ" ಎಂದು ಟ್ವೀಟ್ನಲ್ಲಿ ಉಲ್ಲೇಖಿಸಿದ್ದಾರೆ.
ರೈತ ಸಂಘಟನೆಗಳ ಪ್ರತಿನಿಧಿಗಳು ಮತ್ತು ಸರ್ಕಾರದೊಂದಿಗೆ ನಡೆದ 9ನೇ ಸುತ್ತಿನ ಮಾತುಕತೆ ನಂತರ ಕಾಂಗ್ರೆಸ್ ಪಕ್ಷ 'ಸ್ಪೀಕ್ಅಪ್ಫಾರ್ಕಿಸಾನ್ಅಧಿಕಾರ್' ಅಭಿಯಾನವನ್ನು ಪ್ರಾರಂಭಿಸಿದೆ.