ಬೆಂಗಳೂರು, ಜ.15 (DaijiworldNews/PY): ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ.ರವಿ ಅವರು ಸಚಿವ ಸಂಪುಟದಲ್ಲಿ ಸ್ಥಾನಮಾನ ಸಿಗದೇ ಇರುವ ಕಾರಣ ಅಸಮಾಧಾನಗೊಂಡಿರುವ ಶಾಸಕರಿಗೆ ನೀತಿ ಪಾಠ ಹೇಳಿದ್ದು, "ಕಾರ್ಯಕರ್ತರ ನಿಸ್ವಾರ್ಥ ತ್ಯಾಗದ ಮುಂದೆ ಬೇರೆ ಯಾವ ತ್ಯಾಗವೂ ದೊಡ್ಡದಲ್ಲ" ಎಂದು ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಅಧಿಕಾರದಲ್ಲಿರುವವರನ್ನು ನೋಡಿಯೂ ಇರದ, ನೋಡುವ ಇಚ್ಚೆಯೂ ಇರದ ಕೋಟ್ಯಾಂತರ ಕಾರ್ಯಕರ್ತರ ತ್ಯಾಗದ ಫಲಸ್ವರೂಪ ನಾವಿಂದು ಇಲ್ಲಿ ನಿಂತಿದ್ದೇವೆ. ಆ ಕಾರ್ಯಕರ್ತ ಅಧಿಕಾರದಲ್ಲಿರುವವರ ಮನೆ, ಕಚೇರಿ, ವಾಹನದ ಹಿಂದೆ ಮುಂದೆ ಎಲ್ಲೂ ಕಾಣಸಿಗುವುದಿಲ್ಲ" ಎಂದಿದ್ದಾರೆ.
"ತನ್ನ ಬೂತನ್ನು ಗೆಲ್ಲಿಸುವುದು ಹೇಗೆ ಎಂಬುದನ್ನು ಯೋಚಿಸುತ್ತಾ, ಕಾರ್ಯತತ್ಪರನಾಗಿರುತ್ತಾನೆ. ಕಾರ್ಯಕರ್ತರ ನಿಸ್ವಾರ್ಥ ತ್ಯಾಗದ ಮುಂದೆ ಬೇರೆ ಯಾವ ತ್ಯಾಗವೂ ದೊಡ್ಡದಲ್ಲ. ಇವತ್ತು ನಾವೇನೇ ಆಗಿದ್ದರೂ ಅದು ನಮ್ಮ ತಳಮಟ್ಟದ ಕಾರ್ಯಕರ್ತ ಕೊಟ್ಟ ಭಿಕ್ಷೆಯೇ ಹೊರತು ಬೇರೆ ಏನೂ ಅಲ್ಲ" ಎಂದು ತಿಳಿಸಿದ್ದಾರೆ.