ಶಿವಮೊಗ್ಗ,,ಜ.15 (DaijiworldNews/HR): "ಬಿಜೆಪಿಯಲ್ಲಿ ಇತ್ತೀಚೆಗೆ ನಡೆಯುತ್ತಿರುವ ಬೆಳವಣಿಗೆ ಮತ್ತು ಶಾಸಕರ ವರ್ತನೆ ನನಗೆ ಬೇಸರ ತರಿಸಿದೆ, ಜೊತೆಗೆ ಪಕ್ಷದ ಹಿತೈಷಿಗಳಿಗೆ, ಹಿರಿಯರಿಗೆ ಈ ಬೆಳವಣಿಗೆ ಸಮಾಧಾನವಿಲ್ಲ" ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕೇವಲ ಮಂತ್ರಿಯಾಗಬೇಕೆಂಬ ಆಸೆಯಿಂದ ರಾಜಕಾರಣಿಯಾಗುವುದು ಸರಿಯಲ್ಲ, ಈ ರೀತಿ ಸಮಸ್ಯೆಯನ್ನು ಯಾರು ಉಂಟು ಮಾಡುತ್ತಿದ್ದಾರೆ. ಅವರ ಬಗ್ಗೆ ಮುಂದಿನ ದಿನದಲ್ಲಿ ಪಕ್ಷ ಶಿಸ್ತು ಕ್ರಮ ತೆಗೆದುಕೊಳ್ಳಬಹುದು, ಆದರೆ ನಮ್ಮದೆ ಪಕ್ಷದವರ ಮೇಲೆ ಶಿಸ್ತು ಕ್ರಮ ಜರುಗಿಸುವುದು ಕೂಡ ಸರಿಯಾಗುವುದಿಲ್ಲ" ಎಂದರು.
ಇನ್ನು "ಸಂಪುಟ ವಿಸ್ತರಣೆ ಸಂಬಂಧ ಅಸಮಾಧಾನ ಇರುವುದು ಸತ್ಯ, ಆದರೆ ಅದನ್ನು ಎಲ್ಲಿ ಸರಿಪಡಿಸಿಕೊಳ್ಳಬೇಕೋ ಅಲ್ಲಿ ಸರಿಪಡಿಸಿಕೊಳ್ಳಬೇಕು. ಅದನ್ನು ಬಿಟ್ಟು ಹಾದಿ ಬೀದಿಯಲ್ಲಿ ಮಾತನಾಡಿದರೆ ಬಗೆಹರಿಯುತ್ತದೆಯೇ?" ಎಂದು ಹೇಳಿದ್ದಾರೆ.