ಹುಬ್ಬಳ್ಳಿ, ಜ.15 (DaijiworldNews/PY): "ಸಿಎಂ ಬಿ.ಎಸ್.ಯಡಿಯೂರಪ್ಪ ನಾಲಿಗೆ ಕಳೆದುಕೊಂಡ ನಾಯಕ, ವಿಜಯೆಂದ್ರ ದಾರಿ ತಪ್ಪಿದ ಮಗ" ಎಂದು ವಿಧಾನಪರಿಷತ್ ಸದಸ್ಯ ಎಚ್. ವಿಶ್ವನಾಥ್ ವ್ಯಂಗ್ಯವಾಡಿದರು.
ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ಬಿಎಸ್.ಯಡಿಯೂರಪ್ಪ ಅವರು ಕಾಮಧೇನು ಇದ್ದಂತೆ. ಅವರ ಪ್ರಾಣ ಅವರ ಪುತ್ರ ವಿಜಯೇಂದ್ರನ ಕೈಯಲ್ಲಿದೆ" ಎಂದರು.
"ಜ.17ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಲು ಸಮಯಾವಕಾಶ ಕೇಳಿದ್ದೇನೆ. ಈ ಸಂದರ್ಭ ರಾಜ್ಯದ ಬೆಳವಣಿಗೆಯ ಬಗ್ಗೆ ಅವರ ಗಮನಕ್ಕೆ ತರುತ್ತೇನೆ" ಎಂದು ಹೇಳಿದರು.
"ನಾನೋರ್ವ ಲೇಖಕನಾಗಿದ್ದು, ಬರಹದ ಮುಖೇನ ಎಲ್ಲವನ್ನೂ ತಿಳಿಸುತ್ತೇನೆ. ಸಿಎಂ ಬಿಎಸ್ವೈ ಅವರು ನನಗಿಂತ ಹಿರಿಯವರು. ಅಧಿಕಾರದ ಆಸೆ ಅವರಿಗೆ ಇರಬೇಕಾದರೆ ನನಗೂ ಕೂಡಾ ಇರಬಾರದಾ?" ಎಂದು ಕೇಳಿದರು.
"ನನಗೆ ಸಚಿವ ಸ್ಥಾನ ನೀಡಿ ಎಂದು ಯಾರಲ್ಲೂ ನಾನು ಕೇಳಿಲ್ಲ. ಆದರೆ, ಜೈಲಿಗೆ ಹೋಗಬೇಕಾದ ಯೋಗೇಶ್ವರ್ ಸಚಿವರಾಗಿದ್ದಾರೆ. ಅವರು ಕೆಲ ದಿನಗಳಲ್ಲಿ ಜೈಲಿಗೆ ಹೋಗುತ್ತಾರೆ" ಎಂದರು.
"ಸಚಿವ ಸ್ಥಾನಕ್ಕಾಗಿ ನಾನು ಪಟ್ಟು ಹಿಡಿದಿಲ್ಲ. ಆದರೆ, ಮಾತಿನ ಮೇಲೆ ಹಾಗೂ ನಡವಳಿಕೆಯ ಮೇಲೆ ಯಾವುದೇ ಪಕ್ಷ ಉಳಿದಿಲ್ಲ. ಯಾವುದೇ ನಾಯಕರೂ ಕೂಡಾ ಕೊಟ್ಟ ಮಾತನ್ನು ಉಳಿಸಿಕೊಂಡಿಲ್ಲ. ಸಿಎಂ ಬಿಎಸ್ವೈ ಅವರು ನನಗೆ ಸಚಿವ ಸ್ಥಾನ ಏಕೆ ನೀಡಿಲ್ಲ ಎನ್ನುವುದನ್ನು ಅವರೇ ತಿಳಿಸಬೇಕು" ಎಂದು ಹೇಳಿದರು.
ಸಿಡಿ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಈ ಬಗ್ಗೆ ಯತ್ನಾಳ್ ಅವರೇ ಹೇಳಬೇಕು. ಸಿಡಿ ಇದೆ ಎಂದಷ್ಟೇ ನಾನು ಹೇಳಿದ್ದು" ಎಂದರು.
"ನಾವು ಭ್ರಷ್ಟಾಚಾರದ ವಿಚಾರವಾಗಿ ಮಾತನಾಡಿದರೆ ನಗೆಪಾಟಲಿಗೆ ಒಳಗಾಗಬೇಕಾಗುತ್ತದೆ. ಭ್ರಷ್ಟಾಚಾರದಲ್ಲಿ ಎಲ್ಲಾ ಪಕ್ಷದ ನಾಯಕರೂ ತೊಡಗಿದ್ದಾರೆ" ಎಂದು ಹೇಳಿದರು.