ಬೆಂಗಳೂರು, ಜ.15 (DaijiworldNews/HR): "ಯಾವುದೇ ಮಹಾಶಕ್ತಿ ದೇಶದ ಸ್ವಾಭಿಮಾನವನ್ನು ಕೆಣಕಲು ಬಂದರೆ ಅದಕ್ಕೆ ಯೋಧರು ತಕ್ಕ ಉತ್ತರ ನೀಡುವ ಸಾಮರ್ಥ್ಯವನ್ನು ಹೊಂದಿದ್ದಾರೆ" ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಈ ಕುರಿತು ಬೆಂಗಳೂರಿನ ಭಾರತೀಯ ವಾಯುಪಡೆಯ ಪ್ರಧಾನ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ನಾವು ಯುದ್ಧವನ್ನು ಬಯಸುವುದಿಲ್ಲ, ನಾವು ಎಲ್ಲರ ಸುರಕ್ಷತೆಯನ್ನು ಕಾಪಾಡುತ್ತಿದ್ದೇವೆ. ಆದರೆ ಯಾವುದೇ ಶಕ್ತಿ ನಮ್ಮ ಸ್ವಾಭಿಮಾನವನ್ನು ಕೆಣಕಲು ಬಂದಲ್ಲಿ ನಮ್ಮ ಯೋಧರು ಅವರಿಗೆ ಸೂಕ್ತ ಉತ್ತರ ನೀಡುತ್ತಾರೆ" ಎಂದರು.
ಇನ್ನು "ನಮ್ಮ ಭಾರತ ಎಂದಿಗೂ ಯಾವುದೇ ರಾಷ್ಟ್ರದೊಂದಿಗೆ ಯುದ್ಧವನ್ನು ಬಯಸುವುದಿಲ್ಲ, ಬದಲಾಗಿ ನೆರೆಹೊರೆಯವರೊಂದಿಗೆ ಶಾಂತಿ ಮತ್ತು ಸ್ನೇಹ ಸಂಬಂಧವನ್ನು ಉಳಿಸಿಕೊಳ್ಳಲು ಆದ್ಯತೆ ನೀಡುತ್ತದೆ, ಯಾಕೆಂದರೆ ಅದು ನಮ್ಮ ರಕ್ತ ಮತ್ತು ಸಂಸ್ಕೃತಿಯಲ್ಲಿ ಅಡಗಿದೆ" ಎಂದು ಹೇಳಿದ್ದಾರೆ.