ಜೈಪುರ, ಜ.15 (DaijiworldNews/PY): ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳ ವಿರುದ್ದ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲಿಸಿ ರಾಜಸ್ಥಾನ ರಾಜಭವನಕ್ಕೆ ಶುಕ್ರವಾರ ಕಾಂಗ್ರೆಸ್ ಪಕ್ಷ ಮುತ್ತಿಗೆ ಹಾಕಲಿದೆ.
ಈ ಬಗ್ಗೆ ತಿಳಿಸಿರುವ ರಾಜಸ್ಥಾನ ಕಾಂಗ್ರೆಸ್, "ಶುಕ್ರವಾರ ಪಕ್ಷದ ರಾಜ್ಯ ಘಟಕದ ಮುಖಂಡರು ಸೇರಿದಂತೆ ಪಕ್ಷದ ಕಾರ್ಯಕರ್ತರು ಕಿಸಾನ್ ಅಧಿಕಾರ್ ದಿನವನ್ನು ಆಚರಿಸಲಿದ್ದಾರೆ. ಆ ನಿಟ್ಟಿನಲ್ಲಿ ಬೆಳಗ್ಗೆ 11 ರಿಂದ ಮಧ್ಯಾಹ್ನ 2 ರ ತನಕ ರಾಜಭವನಕ್ಕೆ ಮುತ್ತಿಗೆ ಹಾಕಿ ಒತ್ತಡ ಹೇರಲಾಗುವುದು" ಎಂದು ಹೇಳಿದೆ.
ಈ ವೇಳೆ ರಾಜಸ್ಥಾನ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಗೋವಿಂದ್ ಸಿಂಗ್ ದೋಟಾಸ್ರಾ, ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜಸ್ಥಾನದ ಉಸ್ತುವಾರಿ ಅಜಯ್ ಮಾಕೆನ್ ಹಾಗೂ ಸಿಎಂ ಅಶೋಕ್ ಗೆಹ್ಲೋಟ್ ಸೇರಿದಂತೆ ಪಕ್ಷದ ಪ್ರಮುಖ ನಾಯಕರು ಉಪಸ್ಥಿತರಿರಲಿದ್ದಾರೆ ಎನ್ನಲಾಗಿದೆ.
ದೆಹಲಿಯ ಕೃಷಿ ಭವನದಲ್ಲಿ ನೂತನ ಕೃಷಿ ಕಾಯ್ದೆಗಳಿಗೆ ಸಂಬಂಧಿಸಿದಂತೆ ರೈತ ಮುಖಂಡರು ಹಾಗೂ ಕೇಂದ್ರ ಸರ್ಕಾರದ ನಡುವೆ ನಡೆದ ಎಂಟನೇ ಸುತ್ತಿನ ಮಾತುಕತೆಯೂ ಕೂಡಾ ವಿಫಲವಾಗಿದ್ದು, ಜ.15ರಂದು ಒಂಭತ್ತನೇ ಸುತ್ತಿನ ಮಾತುಕತೆ ನಡೆಯಲಿದೆ ಎಂದು ಕೇಂದ್ರ ಸರ್ಕಾರ ಹೇಳಿತ್ತು.