ನವದೆಹಲಿ, ಜ.15 (DaijiworldNews/PY): "ಗರ್ಭಿಣಿಯರು ಹಾಗೂ ಹಾಲುಣಿಸುವ ಬಾಣಂತಿಯರನ್ನು ಕೊರೊನಾ ಲಸಿಕೆ ಪ್ರಯೋಗಕ್ಕೆ ಒಳಪಡಿಸದೇ ಇರುವುದರಿಂದ ಸದ್ಯ ಅವರಿಗೆ ಕೊರೊನಾ ಲಸಿಕೆ ನೀಡಬಾರದು" ಎಂದು ರಾಜ್ಯಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯ ಸೂಚಿಸಿದೆ.
ಸಾಂದರ್ಭಿಕ ಚಿತ್ರ
ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯವು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿದ್ದು, "ತುರ್ತು ಬಳಕೆಯ ದೃಢೀಕರಣದ ಅಡಿಯಲ್ಲಿ ಕೊರೊನಾ ವೈರಸ್ ವ್ಯಾಕ್ಸಿನೇಷನ್ ಅನ್ನು 18 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟವರಿಗೆ ನೀಡಬಹುದು. ಅಗತ್ಯವಿದ್ದರೆ, ಕೊರೊನಾ ಲಸಿಕೆ ಹಾಗೂ ಇತರ ಲಸಿಕೆಗಳ ನಡುವೆ ಕನಿಷ್ಠ 14 ದಿನ ಅಂತರ ಕಾಯ್ದುಕೊಳ್ಳಬೇಕು" ಎಂದು ತಿಳಿಸಿದೆ.
"ಎರಡನೇ ಡೋಸ್ ನೀಡುವ ಸಂದರ್ಭ ಯಾವ ಕಂಪೆನಿಯ ಲಸಿಕೆ ನೀಡಲಾಗಿದೆಯೋ ಅದೇ ಲಸಿಕೆಯನ್ನು ನೀಡಬೇಕು. ಎರಡು ಪ್ರತ್ಯೇಕವಾದ ಕೊರೊನಾ ಲಸಿಕೆಗಳನ್ನು ನೀಡಬಾರದು" ಎಂದು ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಮನೋಹರ್ ಅಗ್ನಾನಿ ಪತ್ರದಲ್ಲಿ ತಿಳಿಸಿದ್ದಾರೆ.