ಪುತ್ತೂರು, ಜ 14 (DaijiworldNews/SM): ಎರಡು ದಿನಗಳ ಬಳಿಕ ಗೃಹಪ್ರವೇಶಗೊಳ್ಳಲಿದ್ದ ತನ್ನ ನೂತನ ಮನೆಯಲ್ಲಿ ವಿದ್ಯುತ್ ಸಂಭಂದಿ ಕೆಲಸದಲ್ಲಿ ನಿರತರಾಗಿದ್ದ ಮನೆ ಯಜಮಾನನಿಗೆ ವಿದ್ಯುತ್ ಶಾಕ್ ತಗಲಿ ಮೃತಪಟ್ಟ ಧಾರುಣ ಘಟನೆ ಪುತ್ತೂರು ತಾಲೂಕಿನ ಸಂಪ್ಯ ಎಂಬಲ್ಲಿ ನಡೆದಿದೆ.
ಸಂಪ್ಯದ ಉದಯಗಿರಿ ನಿವಾಸಿ ವೆಂಕಪ್ಪನಾಯ್ಕ್ ಎಂಬವರ ಪುತ್ರ ಕೃಷ್ಣಪ್ಪ ನಾಯ್ಕ್ (45 ) ವಿದ್ಯುತ್ ಶಾಕ್ ಗೆ ಒಳಗಾಗಿ ಮೃತ ಪಟ್ಟ ದುರ್ದೈವಿ. ಮೃತರು ಪುತ್ತೂರಿನ ಪರ್ಲಡ್ಕ ಬೈಪಾಸು ಬಳಿ ಜೀಪ್ ಮೆಕ್ಯಾನಿಕ್ ಆಗಿದ್ದರು. ಪುತ್ತೂರಿನ ಸಂಪ್ಯದ ಉದಯಗಿರಿ ಎಂಬಲ್ಲಿ ಕೃಷ್ಣಪ್ಪ ನಾಯ್ಕರವರು ನೂತನವಾಗಿ ಮನೆ ಕಟ್ಟಿಸಿದ್ದು ಅದರ ಗೃಹಪ್ರವೇಶ ಮುಂದಿನ ಶನಿವಾರ(ಜನವರಿ 16ರಂದು) ನಿಗದಿಯಾಗಿತ್ತು. ಬುಧವಾರ ರಾತ್ರಿ ಗೃಹಪ್ರವೇಶದ ಆರಂಭದ ಶಾಸ್ತ್ರವಾದ ಕುಟ್ಟಿ ಪೂಜೆ ನೆರವೇರಿತ್ತು. ಗುರುವಾರ ಸಂಜೆ ಮೂರು ಗಂಟೆ ಸುಮಾರಿಗೆ ಹೊಸ ಮನೆಯಲ್ಲಿ ಕೃಷ್ಣಪ್ಪ ನಾಯ್ಕ್ ರವರು ಪ್ಲಗ್ ಸಿಕ್ಕಿಸುವ ಕಾರ್ಯದಲ್ಲಿ ನಿರತರಾಗಿದ್ದಾಗ ಅವರಿಗೆ ವಿದ್ಯುತ್ ಶಾಕ್ ತಗುಲಿದೆ.
ಕೂಡಲೇ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಬರಲಾಯಿತಾದರೂ ಅವರು ಬದುಕಿ ಉಳಿಯಲಿಲ್ಲ. ಇದೀಗ ಗೃಹ ಪ್ರವೇಶದ ಮನೆ ಸೂತಕದ ಮನೆಯಾಗಿ ಬದಲಾಗಿದೆ.
ಅವರ ಅಣ್ಣ ಚೋಮ ನಾಯ್ಕ್ ರವರು ನೀಡಿದ ದೂರಿನಂತೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ